ಚಿತ್ರದುರ್ಗ ಪಿಎಸ್ಐ ಗಾದ್ರಿ ಲಿಂಗಪ್ಪಗೌಡರ ಮೇಲೆ ಮುಗಿಬಿದ್ದ ಬಿಜೆಪಿ ನಾಯಕರು: ಅಮಾನತಿಗೆ ಆಗ್ರಹ

ಚಿತ್ರದುರ್ಗ, ಮಾ. 15: ಮಧುಗಿರಿ ಬಿಜೆಪಿ (ಸಂಘಟನಾ ಜಿಲ್ಲೆ) ಜಿಲ್ಲಾಧ್ಯಕ್ಷ ಹನುಮಂತೇಗೌಡರ ಮೇಲೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಯನ್ನು ತಕ್ಷಣ ಅಮಾನತು ಮಾಡಬೇಕು ಹಾಗೂ ಈ ಘಟನೆಯ ಕುರಿತು ಪೊಲೀಸ್ ಇಲಾಖೆ ಗಂಭೀರ ತನಿಖೆ ನಡೆಸಬೇಕು ಎಂದು ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದ್ದಾರೆ.

ಜಟಾಪಟಿ ನಂತರ ಆಸ್ಪತ್ರೆಗೆ ದಾಖಲಾಗಿರುವ ಹನುಮಂತೇಗೌಡ ಅವರನ್ನು ಭೇಟಿಯಾದ ನಂತರ ಅವರು ಮಾತನಾಡಿದರು.

ಘಟನೆಯ ವಿವರ:
ನಿನ್ನೆ ರಾತ್ರಿ, ನಗರದ ಐಶ್ವರ್ಯ ಪೋಂಟ್ ಬಳಿಯಲ್ಲಿ ಹನುಮಂತೇಗೌಡ ಹಾಗೂ ಪಿಎಸ್‌ಐ ಗಾದ್ರಿ ಲಿಂಗಪ್ಪ ಗೌಡರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದವು ತೀವ್ರಗೊಂಡು ಇಬ್ಬರೂ ಕೈಕೈ ಮಿಲಾಯಿಸಿದ ವಿಡಿಯೋ ವೈರಲ್ ಆಗಿದೆ. ಘಟನೆ ನಂತರ ಹನುಮಂತೇಗೌಡ ಅವರನ್ನು ಬಂಧಿಸಲಾಗಿತ್ತು.

ಆದರೆ ಪಿಎಸ್ಐ ತನ್ನ ಪಿಸ್ತೂಲು ಕೈಗೆತ್ತಿಕೊಂಡು ಹನುಮಂತೇಗೌಡರ ಮೇಲೆ ಗುರಿ ಹಿಡಿದಿದ್ದಾನೆ. ಇದನ್ನು ತಪ್ಪಿಸುವ ಯತ್ನದಲ್ಲಿ ಹನುಮಂತೇಗೌಡ ಅವರ ಕೈಗೆ ಗಾಯವಾಗಿದೆ. ಆಕ್ರೋಶಗೊಂಡ ಪೊಲೀಸ್ ಅಧಿಕಾರಿ ಅವರನ್ನು ಎದೆ, ತಲೆ ಹಾಗೂ ಗುಪ್ತಾಂಗದ ಭಾಗಗಳಿಗೆ ಬೂಟ್ ಕಾಲಿನಿಂದ ಒದ್ದಿದ್ದಾರೆ ಎಂದು ಸಂಸದ ಆರೋಪಿಸಿದ್ದಾರೆ

ಸಂಸದ ಕಾರಜೋಳ ಪ್ರತಿಕ್ರಿಯೆ:
ಗಾಯಗೊಂಡ ಹನುಮಂತೇಗೌಡ ಅವರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜನರ ರಕ್ಷಣೆಗೆ ನೇಮಕಗೊಂಡ ಪೋಲಿಸರೇ ಹಲ್ಲೆ ಮಾಡುತ್ತಿದ್ದಾರೆ. ಇಂತಹ ಅಧಿಕಾರಿಗಳಿಗೆ ಖಾಕಿ ಬಟ್ಟೆ ಧರಿಸುವ ಯೋಗ್ಯತೆಯೇ ಇಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತೀಯ ಜನತಾ ಪಕ್ಷದ ನಾಯಕರ ಖಂಡನೆ:
ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ ಸೇರಿದಂತೆ ಬಿಜೆಪಿ ಮುಖಂಡರು ಈ ಘಟನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಹನುಮಂತೇಗೌಡ ಅವರು ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದಾರೆ. ಪಿಎಸ್‌ಐಗೆ ಅವರ ಗುರುತು ತಿಳಿದರೂ ಸಹ ಹಲ್ಲೆ ಮಾಡಿದ್ದಾರೆ. ಇದು ಅಸಹ್ಯಕರ ಘಟನೆ. ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು,” ಎಂದು ತಿಪ್ಪಾರೆಡ್ಡಿ ಒತ್ತಾಯಿಸಿದರು.

ಪಕ್ಷದಿಂದ ಹೋರಾಟ:
ಈ ಘಟನೆ ಸಂಬಂಧ ಪೊಲೀಸ್ ಇಲಾಖೆಯಿಂದ ತಕ್ಷಣ ನ್ಯಾಯಸಮ್ಮತ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದು, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ಮಾಜಿ ಅಧ್ಯಕ್ಷ ನರೇಂದ್ರನಾಥ್, ಮುಖಂಡರಾದ ಕುಮಾರಸ್ವಾಮಿ, ಮೋಹನ್, ಬೇದ್ರೇ ನಾಗರಾಜ್, ವೆಂಕಟೇಶ್ ಯಾದವ್, ಶಂಭು ಸೇರಿ ಹಲವಾರು ಮುಖಂಡರು ಉಪಸ್ಥಿತರಿದ್ದರು.