ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುರ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಮೆಡಿಕಲ್ ಎಮರ್ಜೆನ್ಸಿ ಘೋಷಿಸಬೇಕು ಎಂದು ಸಂಸದ, ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೆಂಗ್ಯೂ ಸೋಂಕಿರಿಗೆ ಕೋವಿಡ್ ಸಂದರ್ಭದ ಮಾದರಿಯಲ್ಲಿಯೇ ಕನಿಷ್ಠ ಮಾನದಂಡದಲ್ಲಿ ಉಚಿತ ಚಿಕಿತ್ಸೆ ನೀಡಬೇಕು. ಸೊಳ್ಳೆಗಳನ್ನು ನಾಶ ಮಾಡಿದರೆ ಮಾತ್ರ ಡೆಂಗ್ಯೂ ನಿಯಂತ್ರಣ ಸಾಧ್ಯ. ಡೆಂಗ್ಯೂ ತಡೆಯದಿದ್ದರೆ ಚಿಕೂನ್ ಗುನ್ಯಾ, ಝೀಕಾ ಸೋಂಕುಗಳೂ ಹರಡಬಹುದು ಎಂದು ಎಚ್ಚರಿಸಿದರು.
ಕೋವಿಡ್ ಪ್ಯಾಂಡಮಿಕ್ ಆಗಿದ್ದರೆ ಡೆಂಗ್ಯೂ ಎಂಡಮಿಕ್ ಆಗಿದೆ. ರಾಜ್ಯಾದ್ಯಂತ ಡೆಂಗ್ಯೂ ಹರಡಿರುವುದರಿಂದ ನಿಯಂತ್ರಣಕ್ಕೆ ತುರ್ತು ಚಿಕಿತ್ಸೆ ಅಗತ್ಯವಿದೆ. ಹಾಗಾಗಿ ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಬೇಕು ಎಂದರು.
ಡೆಂಗ್ಯೂ ಮಕ್ಕಳನ್ನು ಹೆಚ್ಚಾಗಿ ಬಾಧಿಸುತ್ತಿದ್ದು, ಶಾಲೆಗಳಿಗೆ ಸುತ್ತೋಲೆ ಹೊರಡಿಸಬೇಕು. ಮಕ್ಕಳಲ್ಲಿ ಮಕ್ಕಳು ಅಸ್ವಸ್ಥರಾಗಿದ್ದರೆ ತಕ್ಷಣ ಚಿಕಿತ್ಸೆಗೆ ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ ಏಳೆಂಟು ಜನ ಸಾವನ್ನಪ್ಪಿದ್ದಾರೆ. ಸೊಳ್ಳೆ ನಿಯಂತ್ರಣ ಮಾಡುವುದರಲ್ಲಿ ಸರ್ಕಾರ ಎಡವಿದೆ ಎಂದರು.
ಏನೇನೋ ಫ್ರೀ ಕೊಡ್ತೀವಿ, ಯಾವುದನ್ನೋ ಉಚಿತ ಕೊಡುತ್ತಿದ್ದಾರೆ. ಅದರ ಜತೆಗೆ ಸ್ಲಂಗಳಲ್ಲಿ, ವಠಾರದಲ್ಲಿ ವಾಸವಾಗಿದ್ದವರ ಮನೆಗೆ ಸೊಳ್ಳೆಪರದೆಯನ್ನು ಉಚಿತವಾಗಿ ನೀಡಬೇಕು. ಇದರಿಂದ ಬಹಳಷ್ಟು ರೋಗ ನಿಯಂತ್ರಣ ಆಗಲಿದೆ ಎಂದು ಸಲಹೆ ನೀಡಿದರು.