ಶಾಲಾಬಿಸಿಯೂಟದಲ್ಲಿ ಹಲ್ಲಿ; ಇಪ್ಪತ್ತು ಮಕ್ಕಳು ಅಸ್ವಸ್ಥ

ಹಾಸನ: ‌ಹಲ್ಲಿ ಬಿದ್ದ ಶಾಲಾ ಬಿಸಿಯೂಟ ಸೇವಿಸಿದ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಅರಕಲಗೂಡು ತಾಲ್ಲೂಕಿನ, ರಾಗಿಮರೂರು ಗ್ರಾಮದ ಶಾಲೆಯಲ್ಲಿ ನಡೆದಿದೆ.

ಇಂದು ಮಧ್ಯಾಹ್ನ ಬಿಸಿಯೂಟ ಸೇವಿಸುತ್ತಿದ್ದ ವೇಳೆ ಓರ್ವ ವಿದ್ಯಾರ್ಥಿ ಊಟ ಮಾಡುತ್ತಿದ್ದ ತಟ್ಟೆಯಲ್ಲಿ ಹಲ್ಲಿ ಪತ್ತೆಯಾಯಿತು. ಅಷ್ಟರಲ್ಲಿ ಹಲವು ವಿದ್ಯಾರ್ಥಿಗಳು ಊಟ ಮಾಡಿದ್ದರು.

ಹಲ್ಲಿ ಸಿಕ್ಕಿದ ನಂತರ ಊಟ ಮಾಡಿದ ಕೂಡಲೇ ವಾಂತಿ ಮಾಡಿಕೊಂಡ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದರು.

ಅಸ್ವಸ್ಥರಾದ ವಿದ್ಯಾರ್ಥಿಗಳಿಗೆ ಹಳ್ಳಿಮೈಸೂರು, ಅರಕಲಗೂಡು ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಲೆಯಲ್ಲಿ ಸುಮಾರು 120 ವಿದ್ಯಾರ್ಥಿಗಳಿದ್ದು, ಉಳಿದವರು ಆರೋಗ್ಯವಾಗಿದ್ದಾರೆ.

ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.