ಹಾಸನ: ಕಲ್ಯಾಣಮಂಟಪಕ್ಕೆ ನುಗ್ಗಿ ಕೀಟಲೆ ಮಾಡಿದ ಕೋತಿ ವರನ ಪಕ್ಕ ಕುಳಿತು ಕಾಟ ಕೊಟ್ಟಿದ್ದಲ್ಲದೆ ಮದುವೆಗೆ ಆಗಮಿಸಿದ್ದ ಐವರು ಸೇರಿ ಎಂಟು ಜನರನ್ನು ಕಚ್ಚಿ ಗಾಯಗೊಳಿಸಿದ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ, ಹಿರೀಸಾವೆಯಲ್ಲಿ ನಿನ್ನೆ ನಡೆದಿದೆ.
ಹಿರೀಸಾವೆಯ-ನುಗ್ಗೆಹಳ್ಳಿ ರಸ್ತೆಯಲ್ಲಿರುವ ಕಲ್ಯಾಣಮಂಟಪಕ್ಕೆ ನುಗ್ಗಿದ ಕೋತಿ ಕೆಲ ಹೊತ್ತು ವರನ ಪಕ್ಕ ಕುಳಿತು ಆತ ಮಿಸುಕಾಡದಂತೆ ಮಾಡಿತು. ಎಬ್ಬಿಸಲು ಹೋದವರನ್ನು ಬೆದರಿಸಿತು.
ನಂತರ ಊಟದ ಹಾಲ್‌ಗೆ ಬಂದು ಮದುವೆ ಊಟ ಮಾಡುತ್ತಿದ್ದವರಿಗೂ ತೊಂದರೆ ನೀಡಿದ ಕೋತಿಗೆ ಪ್ರತ್ಯೇಕ ಆಸನ ನೀಡಿ, ಬಾಳೆಗೊನೆಯನ್ನೇ ಕೊಟ್ಟರೂ ಮಂಗನಾಟ ನಿಲ್ಲಲ್ಲಿಲ್ಲ.
ಮದುವೆ ಬಂದ ಅತಿಥಿಗಳಾದ ಗಿರಿಗೌಡ, ಗಿರಿಜಮ್ಮ, ತಿಮ್ಮೇಗೌಡ, ಸುಶೀಲಮ್ಮ, ಲೀಲಾವತಿ, ನಿಂಗೇಗೌಡ, ಗೌರಮ್ಮ, ಎಂಬುವವರನ್ನು ಕಚ್ಚಿ ಗಾಯಗೊಳಿಸಿತು. ಅವರ ಚೀರಾಟದಿಂದ ಮದುವೆ ಮನೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ಗಾಯಾಳುಗಳಿಗೆ ಹಿರಿಸಾವೆ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. ಬಹಳಷ್ಟು ಕಾಟ ಕೊಟ್ಟ ಮಂಗ ನಂತರ ಕಲ್ಯಾಣ ಮಂಟಪದಿಂದ ತೆರಳಿತು.
ಹಿರೀಸಾವೆ ಸುತ್ತಮುತ್ತಲ ಗ್ರಾಮಗಳಲ್ಲಿ ಸಂಚರಿಸುತ್ತಿರುವ ತಂಟೆಕೋರ ಕೋತಿಯನ್ನು ಹಿಡಿದು ಸ್ಥಳಾಂತರ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.