ಹಾಸನ: ವಿಪಕ್ಷಗಳ ಕಾಂಗ್ರೆಸ್- ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಬರ ಕಾಡುತ್ತದೆ ಎನ್ನುವ ಆರೋಪವನ್ನು ಅಣಕಿಸುವಂತೆ
ಹೊಳೆನರಸೀಪುರದಲ್ಲಿಂದು ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ ಆರಂಭಿಸುತ್ತಿದ್ದಂತೆ ಧಾರಾಕಾರ ಮಳೆ ಸುರಿಯಿತು.
ಸಭೆಯಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ದಿಕ್ಕಾಪಾಲಾಗಿ ಓಡಿದರೆ ಭದ್ರತಾ ಸಿಬ್ಬಂದಿ ಮೂರ್ನಾಲ್ಕು ಛತ್ರಿಗಳನ್ನು ಒಟ್ಟು ಸೇರಿಸಿ ಸಿಎಂ ಅವರನ್ನು ವೇದಿಕೆಯಿಂದ ಸುರಕ್ಷಿತವಾಗಿ ಕರೆದೊಯ್ಯಬೇಕಾಯಿತು.
ಮಳೆ ಆರಂಭವಾದ ಹದಿನೈದು ನಿಮಿಷಗಳ ಕಾಲ ಭಾಷಣ ಮುಂದುವರಿಸಿದ ಸಿಎಂ ಮಾತು ಕೇಳಲು ಸಾವಿರಾರು ಕಾರ್ಯಕರ್ತರು ತಾವು ಕುಳಿತಿದ್ದ ಕುರ್ಚಿಗಳನ್ನೇ ಛತ್ರಿ ಮಾಡಿಕೊಂಡು ನಿಂತರು.
ಮಳೆ ಹಿನ್ನಲೆಯಲ್ಲಿ ಬೇಗ ಭಾಷಣ ಮುಗಿಸಿದ ಸಿಎಂ ಸಿದ್ದರಾಮಯ್ಯ, ಮಳೆಯಿಂದಾಗಿ ವೇದಿಯಿಂದ ತೆರಳಲಾಗದೆ ಅಲ್ಲಿಯೇ ನಿಂತರು. ಛತ್ರಿ ನೆರವು ಸಿಕ್ಕರೂ ಮುಂದೆ ಬರಲಾಗದೆ ನಿಂತಲ್ಲೇ ಉಳಿಯುವಂತಾಯಿತು.
ಕಡೆಗೆ ಎರಡು ಮೂರು ಛತ್ರಿ ಒಟ್ಟು ಮಾಡಿದ ಭದ್ರತಾ ಸಿಬ್ಬಂದಿ ಸಿಎಂರನ್ನು ಸುರಕ್ಷಿತವಾಗಿ ವೇದಿಕೆಯಿಂದ ಕರೆದೊಯ್ದರು. ನಂತರ ಅವರು ಚನ್ನರಾಯಪಟ್ಟಣಕ್ಕೆ ಪ್ರಯಾಣ ಬೆಳೆಸಿದರು.
ಅರ್ಧ ಗಂಟೆಯಿಂದ ಕುರ್ಚಿಗಳನ್ನೇ ಛತ್ರಿ ಮಾಡಿಕೊಂಡು ಶಾಮಿಯಾನದ ಕೆಳಗೆ ನಿಂತು ಪರದಾಡುತ್ತಿದ್ದ ನೂರಾರು ಜನರು ಸಿಎಂ ಭಾಷಣ ನಿಲ್ಲಿಸುತ್ತಲೇ ಕುರ್ಚಿಗಳನ್ನು ತಲೆ ಮೇಲೆ ಹೊತ್ತುಕೊಂಡು ಅಲ್ಲಿಂದ ನಿರ್ಗಮಿಸಿದರು. ಕ್ಷಣಾರ್ಧದಲ್ಲಿ ಶಾಮಿಯಾನ ಕೆಳಗೆ ಕುರ್ಚಿಗಳೇ ಇಲ್ಲದಂತಾದವು.