ಹಾಸನಕ್ಕೆ ಬಿಡಿಗಾಸೂ ಅನುದಾನ ನೀಡದೆ ಯಾವ ಸಾಧನೆ ತೋರಿಸಲು ಕಾಂಗ್ರೆಸ್ ಸಮಾವೇಶ?; ಶಾಸಕ ಸ್ವರೂಪ್ ಪ್ರಕಾಶ್ ಪ್ರಶ್ನೆ

ಹಾಸನ; ಕಾಂಗ್ರೆಸ್ ಸರ್ಕಾರ ಜಿಲ್ಲೆಯ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಿಡಿಗಾಸೂ ಅನುದಾನ ಬಿಡುಗಡೆ ಮಾಡದೆ ಡಿ.5ರಂದು ನಗರದಲ್ಲಿ ಜನಕಲ್ಯಾಣ ಸಮಾವೇಶ ಆಯೋಜಿಸಿರುವುದು ಖಂಡನೀಯ ಎಂದು ಶಾಸಕ ಸ್ವರೂಪ್ ಪ್ರಕಾಶ್ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ನಗರದ ವಿಮಾನ ನಿಲ್ದಾಣ, ಫ್ಲೈ ಓವರ್, ಆಸ್ಪತ್ರೆ ಕಟ್ಟಡಗಳು, ರಸ್ತೆಗಳ ಕಾಮಗಾರಿಗಳು ನನೆಗುದಿಗೆ ಬಿದ್ದಿದ್ದು, ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಹೀಗಿರುವಾಗ ಸರ್ಕಾರ ಜಿಲ್ಲೆಗ ನೀಡಿರುವ ಕೊಡುಗೆ ಏನು ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಶಾಸಕರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿಯ ಅನುದಾನವನ್ನೂ ಸಮರ್ಪಕವಾಗಿ ಬಿಡುಗಡೆ ಮಾಡುತ್ತಿಲ್ಲ. ಈ ವರ್ಷ ಕೇವಲ ಒಂದು ಕೋಟಿ ರೂ. ನೀಡಿದ್ದಾರೆ. ಎಲ್ಲ ಶಾಸಕರೂ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗದೇ ತೊಂದರೆ ಅನುಭಿಸುತ್ತಿದ್ದಾರೆ. ಸರ್ಕಾರ ಮೊದಲು ಜಿಲ್ಲೆಯ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿ ನಂತರ ಸಮಾವೇಶ ಮಾಡಿ ತನ್ನ ಸಾಧನೆಗಳನ್ನು ಹೇಳಿಕೊಳ್ಳಲಿ ಎಂದರು.

ನಗರಸಭೆ ಅಧ್ಯಕ್ಷ ಚಂದ್ರೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ಜಿಲ್ಲಾ ವಕ್ತಾರ ಹೊಂಗೆರೆ ರಘು, ಶ್ರೇಯಸ್ ಇದ್ದರು.