ಹನುಮಂತಪುರದಲ್ಲಿ ₹1.5 ಕೋಟಿ ವೆಚ್ಚದ ಒಣ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕೆ ಶಾಸಕ ಸ್ವರೂಪ್ ಪ್ರಕಾಶ್ ಗುದ್ದಲಿ ಪೂಜೆ

ಹಾಸನ : ಸ್ವಚ್ಛ ಭಾರತ್ ಮಿಷನ್ ಹಂತ -2 ರ ಯೋಜನೆಯ ಅಡಿಯಲ್ಲಿ ಹಾಸನ ತಾಲೂಕು ಹನುಮಂತಪುರ ಬಳಿ 1.5 ಕೋಟಿ ರೂ. ವೆಚ್ಚದ ಒಣತ್ಯಾಜ್ಯ ಸಂಪೂರ್ಣ ನಿರ್ವಹಣಾ ಘಟಕ ನಿರ್ಮಾಣಕ್ಕೆ ಇಂದು ಶಾಸಕ ಸ್ವರೂಪ ಪ್ರಕಾಶ್ ಗುದ್ದಲಿ ಪೂಜೆ ನೆರವೇರಿಸಿದರು.

ಬಳಿಕ ಶಾಸಕ ಸ್ವರೂಪಕಾಶ್ ಮಾತನಾಡಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ಕಸದ ನಿರ್ವಹಣೆಗಾಗಿ ಜಿಲ್ಲಾ ಪಂಚಾಯತಿ ಮೂಲಕ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ ಮಾಡಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ಕಸದ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಕೆಲಸ ಮಾಡಲಿದೆ. ಇದರ ಜತೆ ಹಾಸನ ನಗರದ ನಿವಾಸಿಗಳು ಕೂಡ ಸಹಕಾರ ನೀಡಬೇಕು. ಈಗಾಗಲೇ ಒಣ ಕಸ ಹಾಗೂ ಹಸಿ ಕಸವನ್ನು ಬೇರ್ಪಡಿಸಿ ಕಸದ ವಾಹನದಲ್ಲೇ ಹಾಕಬೇಕು ಎಂಬ ನಿಯಮವಿದೆ. ಅದನ್ನು ಕಡ್ಡಾಯವಾಗಿ ಪಾಲನೆ ಮಾಡುವ ಮೂಲಕ ಹಾಸನ ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಸಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಅಸಮರ್ಪಕ ಕಸ ನಿರ್ವಹಣೆಯ ಫಲವಾಗಿ ಇತ್ತೀಚಿನ ದಿನಗಳಲ್ಲಿ ಜನರ ಆರೋಗ್ಯದಲ್ಲಿ ಸಮಸ್ಯೆಗಳು ಕಂಡುಬರುತ್ತಿದೆ. ಅವುಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಕಸದ ವಾಹನದಲ್ಲೇ ಹಾಕಿ ನಗರಸಭೆಯೊಂದಿಗೆ ಕೈಜೋಡಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ಮುಂದಾಗೋಣ ಎಂದು ಕರೆ ನೀಡಿದರು

ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿ ಕಸದ ನಿರ್ವಹಣೆಗೆ ಅನುಕೂಲ ಕಲ್ಪಿಸಬೇಕು, ಸುತ್ತಮುತ್ತಲ ಜನರಿಗೂ ಸಮಸ್ಯೆಯಾಗದಂತೆ  ಕಾಮಗಾರಿ ನಡೆಸಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಶಾಸಕ ಸ್ವರೂಪ್ ಸೂಚನೆ ನೀಡಿದರು.

ಈ ವೇಳೆ ನಗರಸಭೆ ಅಧ್ಯಕ್ಷ ಚಂದ್ರೇಗೌಡ, ಉಪಾಧ್ಯಕ್ಷ ಸುರೇಶ್, KRDL ಅಧಿಕಾರಿಗಳಾದ AEE ನವ್ಯಶ್ರೀ, EE ಅಣ್ಣಯ್ಯ, ಆಗಿಲೆ ಗ್ರಾಮದ ಮುಖಂಡ ಮೊಗಣ್ಣ, ಹೊನ್ನೇಗೌಡ, ಮಾರಗೋಡನಹಳ್ಳಿ ರಾಜಣ್ಣ, ಹನುಮಂತಪುರ ರಾಮಚಂದ್ರ, ಜಗದೀಶ್ , ಬಿದರೆಕೆರೆ ಜಯರಾಮ್, ನಾಗೇಶ್ ಬಿಟ್ಟ ಗೌಡನಹಳ್ಳಿ, ರಾಜಣ್ಣ ಇತರರು ಇದ್ದರು.