ಜೆಡಿಎಸ್ ಸದಸ್ಯರನ್ನೇ ಕಣಕ್ಕಿಳಿಸಿ ಮೈತ್ರಿಗೆ ಮುಖಭಂಗ ಮಾಡಿದ ಕೆ.ಎಂ.ಶಿವಲಿಂಗೇಗೌಡ

ಹಾಸನ: ಅರಸೀಕೆರೆ ನಗರಸಭೆ ಅಧ್ಯಕ್ಚ, ಉಪಾಧ್ಯಕ್ಷರ ಸ್ಥಾನದ ಚುನಾವಣೆ ಚಟುವಟಿಕೆಗಳಲ್ಲಿ ಒಟ್ಟಿನಲ್ಲಿ ತಾವು ಎಲ್ಲಿಯೂ ಪ್ರತ್ಯಕ್ಷವಾಗಿ ಗುರುತಿಸಿಕೊಳ್ಳದ ಶಾಸಕ ಶಿವಲಿಂಗೇಗೌಡ, ತಮ್ಮ ಜೊತೆ ಗುರುತಿಸಿಕೊಂಡಿದ್ದ ಸದಸ್ಯರನ್ನು ಆರಂಭದಿಂದ ಕಡೆವರೆಗೂ ಒಟ್ಟಾಗಿ ಕಾಯ್ದಿಟ್ಟುಕೊಳ್ಳುವ ಮೂಲಕ ಕಳೆದ ಬಾರಿ ಕೈ ತಪ್ಪಿದ್ದ ನಗರಸಭೆ ಗಾದಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಎನ್.ಡಿ.ಎ.ಮೈತ್ರಿಗೂ ಮುಖಭಂಗವುಂಟು ಮಾಡಿದ್ದಾರೆ.

ಆದರೆ ಮುಂದೆ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಈಗಲೇ ಹೇಳಲಾಗದು, ಆದರೂ ಸದ್ಯಕ್ಕೆ ಶಿವಲಿಂಗೇಗೌಡರು ತಮ್ಮದೇ ಮಾಸ್ಟರ್ ಪ್ಲಾನ್ ಮೂಲಕ ಮೇಲುಗೈ ಸಾಧಿಸಿದ್ದಾರೆ. ಈ ಕುರಿತು ಮಾತನಾಡಿದ ಶಿವಲಿಂಗೇಗೌಡರು, ನಾನು ಕಾಂಗ್ರೆಸ್‌ನಿಂದ ಗೆದ್ದಿದ್ದೇನೆ. ನಗರಸಭೆಯಲ್ಲಿ ನಮ್ಮ ಪಕ್ಷದ ಒಬ್ಬರೇ ಸದಸ್ಯರಿದ್ದರು. ಹಾಗಾಗಿ ನಾವು ಚುನಾವಣೆಯಲ್ಲಿ ಸ್ಪರ್ಧೆ ಮಾಡಿಲ್ಲ, ಎಲೆಕ್ಷನ್ ಪ್ರಕ್ರಿಯೆಯಲ್ಲೂ ಭಾಗಿಯಾಗಿಲ್ಲ ಎಂದಷ್ಟೇ ಹೇಳಿ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದರು.

ಮೈತ್ರಿಗೆ ಮುಖಭಂಗ:
ನಿನ್ನೆಯಷ್ಟೇ ನಡೆದ ಅರಕಲಗೂಡು ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಸಂಖ್ಯಾಬಲ ಹೊಂದಿದ್ದರೂ, ಕಾಂಗ್ರೆಸ್ ಗೆದ್ದಿತ್ತು. ಅರಸೀಕೆರೆಯಲ್ಲೂ ಕೂಡ ಅದೇ ಪರಿಸ್ಥಿತಿ ಪುನರಾವರ್ತನೆಗೊಂಡಿತು. ಕೇವಲ ಓರ್ವ ಕಾಂಗ್ರೆಸ್ ಸದಸ್ಯನಿದ್ದರೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನು ಶಿವಲಿಂಗೇಗೌಡರ ಆಪ್ತರೇ ಗೆದ್ದರು. ದೋಸ್ತಿಗಳಿಗೆ ಮಣ್ಣು ಮುಕ್ಕಿಸಿ ತಮ್ಮ ಬೆಂಬಲಿಗರನ್ನು ಶಿವಲಿಂಗೇಗೌಡ ಗೆಲ್ಲಿಸಿಕೊಂಡರು.

ಜೆಡಿಎಸ್‌ನಿಂದ ಆಯ್ಕೆ ಆದರೂ ಶಿವಲಿಂಗೇಗೌಡ ಜೊತೆ ಗುರುತಿಸಿಕೊಂಡಿದ್ದ 13 ಸದಸ್ಯರು, ಕೊನೆವರೆಗೂ ಜೊತೆಯಾಗಿದ್ದು ಗೆದ್ದರು. ಓರ್ವ ಪಕ್ಷೇತರ ಸದಸ್ಯ ಇವರ ಕೈ ಹಿಡಿದರು. ಜೆಡಿಎಸ್‌ನಿಂದ ವಿಪ್ ಜಾರಿಯಾಗಿದ್ದರೂ, ಜೆಡಿಎಸ್ ಸದಸ್ಯರನ್ನೇ ಕಣಕ್ಕಿಳಿಸಿ ಶಿವಲಿಂಗೇಗೌಡ ಗೆದ್ದರು.

ಅಭಿವೃದ್ಧಿಯೇ ನಮ್ಮ ಆದ್ಯತೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ. ಎಲ್ಲ ಸದಸ್ಯರ ವಿಶ್ವಾಸ, ಸಹಕಾರ ಪಡೆದು ನಗರವನ್ನು ಮತ್ತಷ್ಟು ಪ್ರಗತಿ ಪಥದತ್ತ ಕೊಂಡೊಯ್ಯಲು ಪ್ರಾಮಾಣ ಕ ಪ್ರಯತ್ನ ಮಾಡುತ್ತೇವೆ. ನಾವು ಜಾತ್ಯಾತೀತ ಜನತಾದಳದಿಂದಲೇ ಗೆದ್ದಿರುವುದು. ಆ ತತ್ವದಡಿಯಲ್ಲೇ ನೀವು ಇರಿ ಎಂದು ನಮ್ಮ ಹಿಂದಿನ ರಾಜ್ಯಾಧ್ಯಕ್ಷರು ಹೇಳಿದ್ದರು. ಅದರಂತೆಯೇ ಇದ್ದೇವೆ. ನಮ್ಮ ಪರ ಇಂದು 14 ಮತ ಬಂದಿವೆ. ಎಲ್ಲರ ಸಹಕಾರ ಪಡೆದು ಕೆಲಸ ಮಾಡುತ್ತೇವೆ.
-ಸಮೀವುಲ್ಲಾ, ನೂತನ ಅಧ್ಯಕ್ಷ