ಸಚಿವನಾಗದಂತೆ ತಡೆಯಲು ಕುತಂತ್ರ: ಹಣ ಹಂಚಿಕೆ ಆಡಿಯೋ ವೈರಲ್ ಬಗ್ಗೆ ಕೆ.ಎಂ.ಶಿವಲಿಂಗೇಗೌಡ ಶಂಕೆ

ಸಂಪುಟ ರಚನೆ ವೇಳೆ ನನ್ನ ಹೆಸರು ಬಂದಿತ್ತು. ಕಡೆಗೆ ತಪ್ಪಿಹೋಯ್ತು. ಈಗಲೂ ಸಚಿವ ಆಗಬಹುದು ಎಂದು ತಡೆಯಲು ಕುತಂತ್ರದಿಂದ ಹೀಗೆ ಮಾಡುತ್ತಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.

ಹಾಸನ:ಲೋಕಸಭಾ ಚುನಾವಣಾ ವೇಳೆಯಲ್ಲಿ ಹಣ ಹಂಚಿಕೆ ಬಗ್ಗೆ ಮಾತನಾಡಿರುವ ಆಡಿಯೋ ವೈರಲ್ ಆಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಕೆ.ಎಂ.ಶಿವಲಿಂಗೇಗೌಡ ಅದು ಮಿಮಿಕ್ರಿ ಮಾಡಿರುವ ನಕಲಿ ಆಡಿಯೋ ಎಂದಿದ್ದಾರೆ.

ಅರಸೀಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೆ.ಎಂ.ಶಿವಲಿಂಗೇಗೌಡ, ನನ್ನ ವಿರುದ್ಧ ಏನೋ ಸಂಚು ನಡೆಯುತ್ತಿರುವ ಅನುಮಾನ ಇದೆ. ಮಿಮಿಕ್ರಿ ಆಡಿಯೋ ಸೃಷ್ಟಿ ಮಾಡಿ ಸಂಚು ಮಾಡಲಾಗಿದೆ ಎಂದು ಆರೋಪಿಸಿದರು.

ನಮ್ಮ ಮನೆಗೆ ನಿತ್ಯ ನೂರಾರು ಜನರು ಬರ್ತಾರೆ. ನಾನು ಮಾತನಾಡಿ ಧ್ವನಿ ತಿರುಚಲಾಗಿದೆ. ಖಂಡಿತಾ ಅದು ನನ್ನ ಮಾತುಗಳಲ್ಲ. ಚುನಾವಣೆ ನಡೆದು ಐದು ತಿಂಗಳು ಕಳೆದಿದೆ. ಆಗ ಮಾತನಾಡಿದ್ದೆ ಎಂದು ಈಗ ಆಡಿಯೋ ಬಿಟ್ಟಿದ್ದಾರೆ ಎಂದು ದೂರಿದರು.

ಕಟ್ ಅಂಡ್ ಪೇಸ್ಟ್ ಮಾಡಿ ಈ ರೀತಿಯ ಆಡಿಯೋ ಸೃಷ್ಟಿ ಮಾಡಲಾಗಿದೆ. ಈ ಹಿಂದೆ ಕೂಡ ಇಂತಹ ಆಡಿಯೋ ಎಡಿಟ್ ಮಾಡಿ ಹರಿ ಬಿಡಲಾಗಿತ್ತು. ಕೆಲವರು ಇಂತಹದೇ ಪ್ರವೃತ್ತಿ ಮಾಡುತ್ತಾರೆ. ಇನ್ಮುಂದೆ ಈ ರೀತಿ ಮಾಡುವುದರ ಬಗ್ಗೆ ಎಚ್ಚರ ವಹಿಸುತ್ತೇವೆ ಎಂದರು.

ಈ ಬಗ್ಗೆ ನಮ್ಮ ವಕೀಲರನ್ನು ಸಂಪರ್ಕ ಮಾಡಿ ದೂರು ಕೊಡುವ ಬಗ್ಗೆ ತೀರ್ಮಾನ ಮಾಡುತ್ತೇನೆ. ಹಣ ಹಂಚಿಕೆ ಬಗ್ಗೆ ಪ್ರಸ್ತಾಪವೇ ಆಗಿಲ್ಲ. ಅದೊಂದು ನಕಲಿ ಆಡಿಯೋ, ಏನು ಬೇಕಾದರೂ ತನಿಖೆ ಆಗಲಿ ಸಿದ್ದನಿದ್ದೇನೆ ಎಂದರು.

ಕೆ.ಎಂ.ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೋ ವೈರಲ್ ವಿಚಾರ ಸಂಬಂಧ ಜೆಡಿಎಸ್‌ನಿಂದ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೂರು ಕೊಡಲಿ ಬಿಡಿ, ಅದಕ್ಕೂ ನನಗೂ ಸಂಬಂಧ ಇಲ್ಲ. ಎಲ್ಲಾ ಆಡಿಯೋಗಳನ್ನು ಕಟ್ ಅಂಡ್ ಪೇಸ್ಟ್ ಮಾಡಲಾಗಿದೆ..ನಾನು ಮಾತಾಡಿರುವ ಕೆಲ ಅಂಶಗಳಲ್ಲಿ ಲೋಕಾರೂಢಿ ಮಾತನಾಡಿದ್ದೇನೆ.

ಆದರೆ ಅದರ ನಡುವೆ ಕೆಲ ಮಾತು ಸೇರಿಸಿ ಕುತಂತ್ರ ಮಾಡಲಾಗಿದೆ. ನನ್ನ ಶಕ್ತಿ ಕುಂದಿಸಲು ಹೀಗೆ ಮಾಡಲಾಗುತ್ತಿದೆ. ರಾಜಕೀಯವಾಗಿ ಮೇಲೆ ಬರದಂತೆ ತಡೆಯಲು ಈ ರೀತಿ ಮಾಡುತ್ತಿದ್ದಾರೆ. ಈ ಬಗ್ಗೆ ನಾನೇ ಸತ್ಯ ಶೋಧನೆ ಮಾಡಬೇಕಾಗಿದೆ. ಸಚಿವ ಆಗೋದು ಬಿಡೋದು ನನ್ನ ಹಣೆಬರಹ ಇದ್ದಂತೆ ಆಗುತ್ತೆ.