ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಗೌಪ್ಯ ಚುನಾವಣೆ; ಡೇರಿಯನ್ನು ಮನೆ ಮಾಡಿಕೊಂಡಿರುವ ಜೆಡಿಎಸ್; ಶಿವಲಿಂಗೇಗೌಡ ಕಿಡಿ

ಸಹಕಾರ ಸಚಿವ ಕೆ.ಎನ್.ರಾಜಣ್ಣ, ವಿದೇಶಕ್ಕೆ ಹೋಗಿರುವುದನ್ನು ನೋಡಿ ಚುನಾವಣೆ ಮಾಡಿದ್ದಾರೆ.

ಹಾಸನ: ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯನ್ನು ಗೌಪ್ಯವಾಗಿ ನಡೆಸುವ ಮೂಲಕ ಡೇರಿಯನ್ನು ಜೆಡಿಎಸ್ ತನ್ನ ಮನೆ ಮಾಡಿಕೊಂಡಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹರಿಹಾಯ್ದರು.

ಸುದ್ದಿಗೋಷ್ಟಿಯಲ್ಲಿ ಭಾನುವಾರ ಮಾತನಾಡಿದ ಅವರು, ಯಾವುದೇ ಚುನಾವಣೆ ಮಾಡಬೇಕಾದರೆ ಜಾಹೀರಾತು ನೀಡಬೇಕು, ಅಧಿಸೂಚನೆ ಹೊರಡಿಸಬೇಕು. ಇದ್ಯಾವುದನ್ನು ಮಾಡದೆ ಜಿಲ್ಲೆಯ ಜನರನ್ನು ವಂಚಿಸಿದ್ದಾರೆ ಎಂದು ದೂರಿದರು.

ಇದ್ದಕ್ಕಿದ್ದಂತೆ ನೋಟಿಫಿಕೇಷನ್ ಮಾಡಿದ್ದಾರೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ, ವಿದೇಶಕ್ಕೆ ಹೋಗಿರುವುದನ್ನು ನೋಡಿ ಚುನಾವಣೆ ಮಾಡಿದ್ದಾರೆ. ಎಲ್ಲಿಯೂ ಪ್ರಚಾರ ಮಾಡದಂತೆ ಡೇರಿ ಕಾರ್ಯದರ್ಶಿಗಳನ್ನು ಹೆದರಿಸಿದ್ದಾರೆ. ಈ ವಿಚಾರವನ್ನು ನಾವು ಇಲ್ಲಿಗೆ ಬಿಡುವುದಿಲ್ಲ. ಡೇರಿ ವ್ಯವಸ್ಥಾಪಕ ನಿರ್ದೇಶಕನ ವಿರುದ್ಧ ಸರ್ಕಾರಕ್ಕೆ ದೂರು ಸಲ್ಲಿಸುತ್ತೇವೆ ಎಂದರು.

ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದ ಎಲ್ಲಾ ಆಕಾಂಕ್ಷಿತರ ಅಭಿಪ್ರಾಯ ಪಡೆದ ಬಳಿಕವೇ ಕಾಂಗ್ರೆಸ್ ನಿಂದ ಶ್ರೇಯಸ್ ಪಟೇಲ್‌ಗೆ ಅವಕಾಶ ನೀಡಲಾಗಿದ್ದು, ಎಲ್ಲರೂ ಒಗ್ಗಟ್ಟಿನಿಂದ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

ಮಾಜಿ ಸಚಿವ ಬಿ.ಶಿವರಾಮು ಅವರಿಗೆ ತಾವೇ ಅಭ್ಯರ್ಥಿಯಾಗಬೇಕೆಂಬ ಆಸೆಯಿತ್ತು. ಆದರೆ ಮೊದಲೇ ಸರ್ವೇ ನಡೆಸಿದ್ದ ಹೈಕಮಾಂಡ್ ಜಿಲ್ಲೆಯ ಜನರ ಒತ್ತಾಸೆಯಂತೆ ಶ್ರೇಯಸ್ ಅವರಿಗೆ ಟಿಕೆಟ್ ಘೋಷಿಸಿದೆ.

ಇದರಿಂದ ಯಾರಿಗೂ ನಿರಾಸೆಯಾಗಿಲ್ಲ. ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷದ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ಪ್ರಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಿರಲಿಲ್ಲ. ಆ ತಪ್ಪಿನ ಅರಿವು ಎಲ್ಲರಿಗೂ ಆಗಿದೆ. ಆ ರೀತಿ ಆಗದಂತೆ ಎಚ್ಚರ ವಹಿಸುತ್ತೇವೆ. ಈಗಾಗಲೇ ಹಾಸನ ಮತ್ತು ಅರಸೀಕೆರೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ಮುಗಿಸಿದ್ದಾರೆ. ಉಳಿದ ತಾಲ್ಲೂಕುಗಳಿಗು ಅವರು ಭೇಟಿ ನೀಡುತ್ತಾರೆ ಎಂದರು.