ಗಣರಾಜ್ಯೋತ್ಸವದ ನೃತ್ಯದಲ್ಲಿ ಕಮಲದ ಹೂವು ಪ್ರದರ್ಶಿಸಿದ್ದಕ್ಕೆ ಸಿಟ್ಟಾದ ಶಾಸಕ ಶಿವಲಿಂಗೇಗೌಡ; ಶಾಲಾ ಶಿಕ್ಷಕಿಗೆ ಹಿಗ್ಗಾಮುಗ್ಗಾ ತರಾಟೆ

ಸಿಟ್ಟಿಗೆದ್ದ ಶಾಸಕರಿಗೆ ಮಾರುತ್ತರ ನೀಡಿದ ಶಿಕ್ಷಕಿ ಲಕ್ಷ್ಮೀ; ನಾಲ್ಕನೇ ಬಹುಮಾನ ನೀಡಿ ಕೈತೊಳೆದುಕೊಂಡ ತಾಲೂಕು ಆಡಳಿತ

ಹಾಸನ : ಅರಸೀಕೆರೆಯಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿನ ನೃತ್ಯ ಪ್ರದರ್ಶನದಲ್ಲಿ ಶಾಲಾ ಮಕ್ಕಳು ಕಮಲದ ಹೂವಿನ ಮಾದರಿ ಪ್ರದರ್ಶಿಸಿದ್ದರಿಂದ ಸಿಟ್ಟಿಗೆದ್ದ ಶಾಸಕ ಕೆ.ಎಂ. ಶಿವಲಿಂಗೇಗೌಡ ಶಿಕ್ಷಕಿಯೊಬ್ಬರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಅದಕ್ಕೆ ಪ್ರತಿಯಾಗಿ ಶಿಕ್ಷಕಿಯೂ ಮಾರುತ್ತರ ನೀಡಿದ್ದರಿಂದ ಸಾರ್ವಜನಿಕರು ವಾಗ್ವಾದಕ್ಕೆ ಸಾಕ್ಷಿಯಾದರು.

ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಒಡೆತನದ ಚಂದ್ರಶೇಖರ ಭಾರತಿ ಶಾಲೆ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯಕ್ಕೆ ಶಾಸಕ ಕೆಎಂಶಿ ವಿರೋಧ ವ್ಯಕ್ತಪಡಿಸಿ, ಆ ಶಾಲೆಯ ಶಿಕ್ಷಕಿ ಲಕ್ಷ್ಮೀ ಅವರೊಂದಿಗೆ ವಾಗ್ವಾದ ನಡೆಸಿದರು.

ಕಮಲ ಯಾವ ಪಕ್ಷದ ಚಿಹ್ನೆ ಯಾವ ಸೀಮೆ ನಾಗರಿಕರು ನೀವು? ಮಕ್ಕಳನ್ನು ಹೇಗೆ ಉದ್ಧಾರ ಮಾಡ್ತೀರಾ ನೀವು? ಎಂದು ಗರಂ ಆದ ಶಾಸಕ ಕೆಎಂಶಿ ಅವರ ಆರ್ಭಟ ಕಂಡು ಕೊಂಚ ಅಧೀರಗೊಂಡ ಶಿಕ್ಷಕಿ ಲಕ್ಷ್ಮಿ, ಕಮಲ ಒಂದು ಪಕ್ಷದ ಚಿಹ್ನೆ ಹೇಗೆ ಆಗುತ್ತೆ ಸರ್? ಎಂದು ಪ್ರಶ್ನಿಸಿದ್ದಲ್ಲದೆ, ನೀವು ಹೀಗೆ ಮಾತನಾಡಿದರೆ ಸರಿ ಹೋಗಲ್ಲ ಸರ್ ಎಂದು ಶಾಸಕರಿಗೇ ತಿರುಗೇಟು ನೀಡಿದರು

ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಶಾಸಕರು, ಏನು ಸರಿ ಹೋಗಲ್ಲ‌? ನಿಮಗೆ ನೋಟೀಸ್ ಕೊಡಬೇಕಾಗುತ್ತದೆ ಎಂದು ಸಿಡಿಮಿಡಿಗೊಂಡರು.

ಮಧ್ಯಪ್ರವೇಶಿಸಿದ ತಹಸೀಲ್ದಾರ್ ಸಂತೋಷ್, ಒಂದು ಧರ್ಮ, ಒಂದು ಪಕ್ಷದ ಚಿಹ್ನೆ ಹೈಲೆಟ್ ಮಾಡಬಾರದು ಎಂದರು.

ನಿನ್ನೆ, ಮೊನ್ನೆ ನೃತ್ಯ ನೋಡಿದವರು ನೋಡಿದರೆ ಅದನ್ನು ಬಳಸುತ್ತಿರಲಿಲ್ಲ. ಸಭೆಯಲ್ಲಿ ಸೂಚನೆ ನೀಡಿದ್ದರೆ ಚಿಹ್ನೆ ಬಳಸುತ್ತಿರಲಿಲ್ಲ ಎಂದು ಶಿಕ್ಷಕಿ ಲಕ್ಷ್ಮೀ ಮಾರುತ್ತರ ನೀಡಿದರು.

ಇದರಿಂದ ಮತ್ತೆ ಅಸಮಾಧಾನಗೊಂಡ ಶಾಸಕರು, ಇವರು ಎಂತದ್ದಾನ್ನಾದರೂ ತೋರಿಸಿಕೊಳ್ಳಲಿ ನನಗೇನು? ಅಲ್ಲಿ ಯಾವಾನೋ ಕುಳಿತಿರ್ತಾನೆ, ಬಿಜೆಪಿ ಚಿಹ್ನೆ ತೋರಿಸುತ್ತಿದ್ದಾರೆ ಎಂದು ಕಲ್ಲು ತೂರಿದರೆ, ಮುಂದೆ ಆಗುವುದನ್ನು ನೋಡಬೇಕು. ಇದು ರಾಷ್ಟ್ರೀಯ ಹಬ್ಬ ಎಂದು ಗರಂ ಆದರು.

ಅತ್ಯುತ್ತಮ ನೃತ್ಯಕ್ಕಾಗಿ ಮೊದಲ ಬಹುಮಾನ ಪಡೆದಿದ್ದ ಚಂದ್ರಶೇಖರ ಭಾರತಿ ಶಾಲೆ ವಿದ್ಯಾರ್ಥಿಗಳಿಗೆ ಶಾಸಕರ ಆಕ್ಷೇಪದ ನಂತರ ನಾಲ್ಕನೇ ಬಹುಮಾನ ನೀಡಿದ ತಾಲ್ಲೂಕು ಆಡಳಿತ ಕೆಎಂಶಿ ಕೋಪದ ತಾಪದಿಂದ ತಪ್ಪಿಸಿಕೊಳ್ಳಲು ಯತ್ನಿಸಿತು.