ಅರಸೀಕೆರೆ;ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಕಟ್ಟಡಗಳ ಲೋಕಾರ್ಪಣೆ ನಿಮಿತ್ತ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಕೆಲ ಸಚಿವರು ಮೇ 30ರಂದು ಆಗಮಿಸಲಿದ್ದಾರೆ ಎಂದು ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನ್ಯಾಯಾಧೀಶರು,ವಕೀಲರು ಹಾಗೂ ಕಕ್ಷಿದಾರರ ಅಗತ್ಯಕ್ಕೆ ತಕ್ಕಂತೆ ಸುಸಜ್ಜಿತ ನ್ಯಾಯಾಲಯದ ಬೃಹತ್ ಸಂಕೀರ್ಣ ನಿರ್ಮಿಸಲಾಗಿದ್ದು ಉದ್ಘಾಟನೆಗೆ ಸಜ್ಜುಗೊಂಡಿದೆ. ತಾಲೂಕಿನ ಲಕ್ಷ್ಮೀದೇವರಹಳ್ಳಿ ಗೇಟ್ ಸಮೀಪ ತಲೆಯೆತ್ತಿರುವ ಇಂಜಿನಿಯರಿಂಗ್ ಕಾಲೇಜು ಆರಂಭಿಸಲು ತಾಂತ್ರಿಕ ಶಿಕ್ಷಣ ಇಲಾಖೆ ಹಸಿರು ನಿಶಾನೆ ತೋರಿದೆ.
ಪ್ರಸಕ್ತ ಸಾಲಿನಲ್ಲಿ 4 ಕೋರ್ಸ್ ಪರಿಚಯಿಸಿದ್ದು 240 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಲಭಿಸಿದೆ. ಇದರಿಂದಾಗಿ ತಾಂತ್ರಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಕನಸು ಶೀಘ್ರದಲ್ಲೇ ನನಸಾಗಲಿದೆ. ಇದಲ್ಲದೇ ರೇಷ್ಮೆ ಫಾರಂ ಹೌಸ್ ಬಳಿ ಕಟ್ಟಲಾಗಿರುವ ಡಿಪ್ಲೊಮಾ ಕಾಲೇಜನ್ನು ಕೂಡ ಹಾಲಿ ಶೈಕ್ಷಣಿಕ ವರ್ಷದಿಂದ ಶೈಕ್ಷಣಿಕ ಪ್ರಕ್ರಿಯೆ ಪ್ರಾಂಭಿಸಿದೆ. ಹೊಸ ತರಕಾರಿ ಮಾರುಕಟ್ಟೆ ಒಳಗೊಂಡಂತೆ ಹಲವು ಹೊಸ ಕಟ್ಟಡಗಳನ್ನು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಹೇಳಿದರು.
ಕ್ಷೇತ್ರದ ವಿದ್ಯುತ್ ಕ್ಷಾಮ ನೀಗಿಸಲು ಅಂದಾಜು 240 ಎಕರೆಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ಕ್ಷೇತ್ರದಲ್ಲಿ 83 ಮೆಗಾವಾಟ್ ವಿದ್ಯುತ್ ಗೆ ಬೇಡಿಕೆಯಿದ್ದು ಸೋಲಾರ್ ಘಟಕ ಸ್ಥಾಪನೆಯಿಂದ 53 ಮೆಗಾವಾಟ್ ವಿದ್ಯುತ್ ದೊರೆಯಲಿದೆ ಎಂದರು.
ಹಳೆಯ ಬಸ್ ನಿಲ್ದಾಣ ವಿಸ್ತರಣೆ, ಪುಡ್ ಪಾರ್ಕ್, ಪತ್ರಕರ್ತರ ಭವನ ನಿರ್ಮಾಣ ಸೇರಿದಂತೆ ಹಲವು ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಲಿದೆ. ಮಾಲೇಕಲ್ ತಿರುಪತಿ ರಾಜಗೋಪುರ ಹಾಗೂ ಯಾತ್ರಿ ನಿವಾಸವನ್ನು ರಥೋತ್ಸವದ ವೇಳೆಗೆ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದು ಎಂದು ಹೇಳಿದರು. ನಗರಸಭೆ ಅಧ್ಯಕ್ಷ ಸಮೀವುಲ್ಲಾ ಇದ್ದರು.