ವಿಕ್ರಂ ಸಿಂಹ ಮನೆಗೆ ಭೇಟಿ ನೀಡಿ ಧೈರ್ಯ ಹೇಳಿದ ಶಾಸಕ ಸಿಮೆಂಟ್ ಮಂಜು; ದುರುದ್ದೇಶಪೂರಿತ ಸಂಚು ಎಂದು ವಾಗ್ದಾಳಿ

ಹಾಸನ : ಬೇಲೂರು ತಾಲ್ಲೂಕಿನ ನಂದಗೊಂಡನಹಳ್ಳಿ ಗ್ರಾಮದಲ್ಲಿ ಮರಗಳ ಅಕ್ರಮ ಕಡಿತಲೆ ಪ್ರಕರಣದಲ್ಲಿ
ಜಾಮೀನು ಪಡೆದ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂಸಿಂಹ ಅವರ ಬಿರಡಹಳ್ಳಿ ನಿವಾಸಕ್ಕೆ ಭೇಟಿ ನೀಡಿದ ಶಾಸಕ ಸಿಮೆಂಟ್ ಮಂಜು ವಿಕ್ರಂ ಅವರನ್ನು ದುರುದ್ದೇಶದಿಂದ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದರು.

ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡಿದ್ದಾರೆ. ಜಮೀನನ್ನು ಅಗ್ರಿಮೆಂಟ್ ಮಾಡಿಕೊಂಡು ಶುಂಠಿ ಬೆಳೆಯುವ ಉದ್ದೇಶದಿಂದ ಇವರು ಅಲ್ಲಿ ಹೋಗಿದ್ದಾರೆ.

ರಾಜಕೀಯ ವೈಷಮ್ಯ, ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ ಎನ್ನುವ ಉದ್ದೇಶದಿಂದ ಎಫ್‌ಐ‌ಆರ್ ದಾಖಲಿಸಿ ಟಾರ್ಗೆಟ್ ಮಾಡಿ ಅನಾವಶ್ಯಕವಾಗಿ ಬಂಧಿಸಿದ್ದಾರೆ ಎಂದು ದೂರಿದರು.

ನ್ಯಾಯಕ್ಕೆ, ಸತ್ಯಕ್ಕೆ ಯಾವತ್ತೂ ಜಯ ಸಿಗುತ್ತೆ ಎನ್ನುವುದಕ್ಕೆ ಅವರಿಗೆ ಬೇಲ್ ಸಿಕ್ಕಿರುವುದೇ ಸಾಕ್ಷಿಯಾಗಿದೆ.

ಅರಣ್ಯ ಇಲಾಖೆಯವರು ದಾಖಲಿಸಿರುವ ಕೇಸ್‌ಗಳನ್ನು ನೋಡಿ ನ್ಯಾಯಧೀಶರು ಕೂಡಲೇ ಜಾಮೀನು ಮಂಜೂರು ಮಾಡಿದ್ದಾರೆ.

ಯಾವುದೇ ತಪ್ಪು ಮಾಡದೇ ಇದ್ದರೂ ಅನಾವಶ್ಯಕವಾಗಿ ಬಂಧನ‌ ಮಾಡಲೇಬೇಕು ಎಂದು ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಈ ಕೆಲಸ ಮಾಡಿದ್ದಾರೆ ಎಂದು ಆಪಾದಿಸಿದರು.

ಇದು ನ್ಯಾಯಕ್ಕೆ ಸಿಕ್ಕ ಜಯ, ಯಾರೂ ಸತ್ಯವನ್ನು ಮರೆ ಮಾಚಬಾರದು.
ದುರುದ್ದೇಶವಾಗಿ ಒಬ್ಬರ ಹೆಸರನ್ನು ಹಾಳು ಮಾಡಬೇಕು ಎನ್ನುವ ಕೃತ್ಯಕ್ಕೆ ನ್ಯಾಯಾಲಯದ ಮೂಲಕ ಜಯ ಸಿಕ್ಕಿದೆ ಎಂದು ಬಣ್ಣಿಸಿದರು.