ಕನ್ನಡ ಪೋಸ್ಟ್ ವರದಿ
ಚನ್ನರಾಯಪಟ್ಟಣ:ಹಿರೀಸಾವೆಯ 36 ಬಡಾವಣೆಗಳು ಹಾಗೂ ಬೀದಿಗಳಿಗೆ ನಾಮಫಲಕ ಅಳವಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲೂಕಿನ ಹಿರೀಸಾವೆ ಗ್ರಾಮದ ಒಂಟಿಕೊಪ್ಪಲು ಬಳಿ ಅಳವಡಿಸಿರುವ ನಾಮಫಲಕವನ್ನು ಗುರುವಾರ ಅನಾವರಣಗೊಳಿಸಿ ಮಾತನಾಡಿ, ಪ್ರತಿ ನಾಮಫಲಕಗಳಲ್ಲಿ ಸಾಹಿತಿಗಳು ಹಾಗೂ ಮಹಾತ್ಮರ ಹೆಸರುಗಳನ್ನು ಬಳಕೆಮಾಡುವುದು ಒಳ್ಳೆಯ ಬೆಳವಣಿಗೆಯಾಗಲಿದೆ ಎಂದರು.
ನರೇಗಾ ಯೋಜನೆಯಡಿ 6 ಕೋಟಿ ರೂ. ವೆಚ್ಚದಲ್ಲಿ ಚರಂಡಿ ಹಾಗೂ ಇತರೆ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸುಲಭ ಶೌಚಾಲಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಶ್ರೀಕಂಠಯ್ಯ ವೃತ್ತಕ್ಕೆ ಹೈಮಾಸ್ ಲೈಟ್ ಅಳವಡಿಕೆಗೆ ವ್ಯವಸ್ಥೆ ಮಾಡಲಾಗಿದೆ. ಅಂಬೇಡ್ಕರ್ ಭವನ ನಿರ್ಮಾಣಕ್ಕೆ 75 ಲಕ್ಷ ರೂ. ಮಂಜೂರಾಗಿದ್ದು ಈಗಾಗಲೇ 13 ಗುಂಟೆ ಜಾಗವನ್ನು ಗುರುತಿಸಲಾಗಿದೆ. ಪ್ರವಾಸಿ ಮಂದಿರ ನಿರ್ಮಾಣಕ್ಕೆ 2 ಕೋಟಿ ರೂ. ಮಂಜೂರಾಗಿದ್ದು ಸ್ಥಳ ನಿಗಧಿಪಡಿಸಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಹಿರೀಸಾವೆ ಗ್ರಾಮಕ್ಕೆ ಹೇಮಾವತಿ ನದಿಯಿಂದ ಕುಡಿಯುವ ನೀರಿನ ಯೋಜನೆ ಕಲ್ಪಿಸಿದ್ದು ಮುಂದಿನ 12 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಹಿರೀಸಾವೆ ಸಮುದಾಯ ಆರೋಗ್ಯ ಕೇಂದ್ರದ ನವೀಕರಣಕ್ಕೆ 1 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಏಪ್ರಿಲ್ ತಿಂಗಳಲ್ಲಿ ಅನುಮೋದನೆಗೊಳಿಸುವುದಾಗಿ ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಈ.ಬೋರಣ್ಣ, ಮಾಜಿ ಅಧ್ಯಕ್ಷ ಎಚ್.ಜೆ.ಮಹೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಎಸ್.ರವಿಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಅಧ್ಯಕ್ಷ ಪ್ರಮೋದ್, ಪ್ರಮುಖರಾದ ರಾಧಾ ರಾಮಣ್ಣ, ಸಂತೋಷ್, ದಿನೇಶ್, ದೇವರಾಜ್, ಬಾಬು ಹಾಗೂ ಇತರರು ಇದ್ದರು.