ಕನ್ನಡ ಫೋಸ್ಟ್ ವರದಿ
ಚನ್ನರಾಯಪಟ್ಟಣ: ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಿ ಚಿಕಿತ್ಸೆ ನೀಡುವುದು ಅಗತ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲೂಕಿನ ಹಿರೀಸಾವೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಎಲ್ಲ ವಿಭಾಗದ ಸಿಬ್ಬಂದಿ ಹೊಂದಾಣಿಕೆಯಿಂದ
ಕೆಲಸ ಮಾಡುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು ಎಂದರು.
ಇಲ್ಲಿ ವೈದ್ಯರ ಕೊರತೆ ಇದ್ದು, ಒಬ್ಬರು ಬಿಎಂಎಸ್ ವೈದ್ಯರು
ಸೇರಿದಂತೆ ಇತರೆ ವೈದ್ಯರನ್ನು ನಿಯೋಜನೆ ಮಾಡುವಂತೆ ಮತ್ತು
ಹೆಚ್ಚುವರಿಯಾಗಿ ಎಕ್ಸ್ರೇ ಯಂತ್ರವನ್ನು ಒದಗಿಸುವಂತೆ
ಸಭೆಯಲ್ಲಿ ಇದ್ದ ಡಿಎಚ್‌ಒ ಹಾಗೂ ಟಿಎಚ್‌ಒ ಅವರಿಗೆ ಸೂಚಿಸಿದರು.
ವೈದ್ಯರ ಶಿಫಾರಸಿನಂತೆ ಆರೋಗ್ಯ ಕೇಂದ್ರದಲ್ಲಿನ ಆಂಬುಲೆನ್ಸ್ ಮೂಲಕ ರೋಗಿಗಳನ್ನು ಉಚಿತವಾಗಿ ಕರೆದುಕೊಂಡು ಹೋಗಬಹುದು. ಆಸ್ಪತ್ರೆಯಲ್ಲಿರುವ ಆಂಬುಲೆನ್ಸ್ ಮತ್ತು ಚಾಲಕರನ್ನು ಬೇರೆ ಕಡೆಗೆ ನಿಯೋಜನೆ ಮಾಡುವಂತೆ ಜಿಲ್ಲಾ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಬರೆದ ಪತ್ರ ಮತ್ತು ಆಸ್ಪತ್ರೆಯಲ್ಲಿನ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ವೈದ್ಯರು, ಕಚೇರಿ ಸಿಬ್ಬಂದಿ ಮತ್ತು ಚಾಲಕರ ನಡುವಿನ ಹೊಂದಾಣಿಕೆ ಕೊರತೆಯಿಂದ ಈ ಸಮಸ್ಯೆ ಉಂಟಾಗಿದೆ. ಎಲ್ಲರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗಿದೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆಯಲ್ಲಿ ಅಗತ್ಯ ಚಿಕಿತ್ಸೆ ನೀಡಲು ಒಬ್ಬ ವೈದ್ಯ ಕರ್ತವ್ಯ ನಿರ್ವಹಿಸಬೇಕು. ರಾತ್ರಿ ಪಾಳಿಯ ವೈದ್ಯರ ಹೆಸರು ಹಾಗೂ ದೂರವಾಣಿ ಸಂಖ್ಯೆಯನ್ನು ಆಸ್ಪತ್ರೆಯ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ.ಕಿಶೋರ್‌ಕುಮಾರ್, ಡಾ.ಹರ್ಷಿತ್ ಡಾ.ಗಿರೀಶ್, ಡಾ.ಮದನಗೌಡ, ಡಾ.ಕಿರಣ್, ಗ್ರಾಮ ಪಂಚಾಯಿತಿ ಅಧ್ಯಕ್ಷ
ಎಚ್.ಈ.ಬೋರಣ್ಣ, ಮಾಜಿ ಅಧ್ಯಕ್ಷ ಎಚ್.ಜೆ.ಮಹೇಶ್, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ರಘು, ಮುಖಂಡರಾದ ರಾಮಕೃಷ್ಣ, ರವಿಕುಮಾರ್, ಮಹೇಶ್, ತೋಟಿ ಜಯರಾಮ್, ಬಾಬು ಮತ್ತು ಆಸ್ಪತ್ರೆಯ ಸಿಬ್ಬಂದಿ ಇದ್ದರು.