ಸಮುದಾಯದ ಬೆಂಬಲದಿಂದ ಮಾತ್ರವೇ ಕನ್ನಡ ಶಾಲೆಗಳ ಅಭಿವೃದ್ಧಿ ಸಾಧ್ಯ: ಸಿ.ಎನ್.ಬಾಲಕೃಷ್ಣ

ಚನ್ನರಾಯಪಟ್ಟಣ: ಸ್ಥಳೀಯ ಸಂಘ, ಸಂಸ್ಥೆಗಳು ಹಾಗೂ ಸಮುದಾಯದ ಸಹಕಾರವಿದ್ದಲ್ಲಿ ಮಾತ್ರ ಸರ್ಕಾರಿ ಕನ್ನಡ ಶಾಲೆಗಳು ಅಭಿವೃದ್ಧಿಯೊಂದಿಗೆ ಪ್ರಗತಿ ಕಾಣಲು ಸಾಧ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ತಾಲೂಕಿನ ಹಿರೀಸಾವೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶುಕ್ರವಾರ ರಾತ್ರಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ನೆರವು ನೀಡಿದಷ್ಟು ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಲಿದೆ. ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಗಳು ಅತಿಮುಖ್ಯವಾಗಲಿವೆ. ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಇಂತಹ ವೇದಿಕೆಗಳು ಸಾಕ್ಷಿಯಾಗಲಿದ್ದು ಕ್ರೀಡೆಗೂ ಹೆಚ್ಚು ಆದ್ಯತೆ ನೀಡುವುದು ಅಗತ್ಯ ಎಂದು ತಿಳಿಸಿದರು.

ಶಾಲೆಗೆ ಹೆಚ್ಚುವರಿ ಕೊಠಡಿಗಳಿಗೆ ಆದ್ಯತೆ ನೀಡಲಿದ್ದು ಕಾಂಪೌಂಡ್ ಎತ್ತರಗೊಳಿಸಲು ಅನುದಾನ ಕಲ್ಪಿಸಲಾಗುವುದು. ವ್ಯಾಸಾಂಗಕ್ಕೆ ತೊಂದರೆಯಾಗದಂತೆ 20 ಡೆಸ್ಕ್ ಒದಗಿಸಲಾಗುವುದು. 13 ಲಕ್ಷ ರೂ. ವೆಚ್ಚದಲ್ಲಿ ಅಡುಗೆ ಕೊಠಡಿ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಪಟ್ಟಣದ ಶ್ರೀಕಂಠಯ್ಯ ವೃತ್ತದಲ್ಲಿ ಪ್ರಯಾಣಿಕರು ನಿಲ್ಲಲು ಅಗತ್ಯ ನೆರಳಿನ ವ್ಯವಸ್ಥೆ ಇಲ್ಲ. 50 ರಿಂದ 60 ಮಂದಿ ಪ್ರಯಾಣಿಕರು ನಿಲ್ಲಲು ಸ್ಥಳ ಹಾಗೂ ಕೂರಲು ಹೊಂದಷ್ಟು ಆಸನಗಳ ವ್ಯವಸ್ಥೆಯುಳ್ಳ ಸುಸಜ್ಜಿತ ತಂಗುದಾಣವನ್ನು ಶೀಘ್ರದಲ್ಲಿಯೇ ನಿರ್ಮಿಸಲಾಗುದು ಎಂದರು.

2 ಕೋಟಿ ರೂ. ವೆಚ್ಚದ ಪ್ರವಾಸಿ ಮಂದಿರ ಮಂಜೂರಾಗಿದ್ದು ಅಂಬೇಡ್ಕರ್ ಭವನ ನಿರ್ಮಿಸಲು 72 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಹಳೆ ಬಿಎಂ ರಸ್ತೆಯಲ್ಲಿ ಶಿಥಿಲಗೊಂಡಿರುವ
ದೊಡ್ಡ ಸೇತುವೆಯ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರತಿಭಾ ಪುರಸ್ಕಾರ ನಡೆಯಿತು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರವಿಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಈ.ಬೋರಣ್ಣ, ಮಾಜಿ ಅಧ್ಯಕ್ಷ ಎಚ್.ಜೆ.ಮಹೇಶ್, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಅಧ್ಯಕ್ಷ ಪ್ರಮೋದ್, ಕ್ಷೇತ್ರ ಶಿಕ್ಷಣಾಧಿಕಾರಿ ದೀಪಾ, ಬಿಆರ್‌ಸಿ ಅನಿಲ್, ಸಿಆರ್‌ಪಿ ಮಂಜುನಾಥ್, ಎಸ್‌ಡಿಎಂಸಿ ಅಧ್ಯಕ್ಷ ಮಧು, ಮುಖ್ಯಶಿಕ್ಷಕಿ ಚಂದ್ರಕಲಾ, ಶಿಕ್ಷಕ ವೃಂದ, ಪಾಲಕರು ಹಾಗೂ ಇತರರು ಇದ್ದರು.