ಚನ್ನರಾಯಪಟ್ಟಣ: ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ, ಬೆಂಬಲ ಬೆಲೆ ಹಾಗೂ ಸೂಕ್ತ ದರ ಸಿಕ್ಕಿದರೆ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲೂಕಿನ ದಿಡಗ ಗ್ರಾಮದ ಎಪಿಎಂಸಿ ಉಪ ಮಾರುಕಟ್ಟೆ
ಪ್ರಾಂಗಣದಲ್ಲಿ 2023-24 ನೇ ಸಾಲಿನ ನಬಾರ್ಡ್ ಆರ್‌ಐಡಿಎಫ್-19 ಯೋಜನೆಯಡಿ 84 ಲಕ್ಷ ರೂ. ವೆಚ್ಚದ ರಸ್ತೆ ಹಾಗೂ ವಿವಿಧ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಇಲ್ಲಿನ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ 84 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಆರ್‌ಸಿಸಿ(ಓಪನ್ ಸೆಡ್), ಚರಂಡಿ ಹಾಗೂ ಮುಚ್ಚು ಹರಾಜು ಕಟ್ಟೆ ನಿರ್ಮಾಣವಾಗಲಿದ್ದು ವ್ಯಾಪಾರಸ್ಥರಿಗೆ ಹಾಗೂ ವ್ಯಾಪ್ತಿಯ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಚನ್ನರಾಯಪಟ್ಟಣದ ಎಪಿಎಂಸಿ ಆವರಣದಲ್ಲಿ ಎಳನೀರು ಖರೀದಿ ಕೇಂದ್ರ ತೆರೆದು ಮುಕ್ತ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿದ್ದು ಇದರಿಂದ ತೆಂಗು ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗಿದೆ. ಯಾವುದೇ ಲೋಪದೋಷಗಳು ಬಾರದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಹಲವು ವರ್ಷಗಳಿಂದ ಕೊಬ್ಬರಿಗೆ ಸೂಕ್ತ ಬೆಲೆ ಸಿಕ್ಕಿರಲಿಲ್ಲ. ಸದ್ಯ
ಕಳೆದ ವಾರದಿಂದ ಉತ್ತಮ ದರ ಸಿಗುತಿದ್ದು ಮತ್ತಷ್ಟು ಬೆಲೆ
ಹೆಚ್ಚುವುದರ ಜತೆಗೆ ನಿಗದಿಪಡಿಸಿದರೆ ರೈತರ ಬದುಕು ಆರ್ಥಿಕವಾಗಿ ಸದೃಢಗೊಳ್ಳಲಿದೆ ಎಂದರು.
ಈ ಬಾರಿ ಮುಂಗಾರಿನಿಂದಲೂ ತಾಲೂಕು ವ್ಯಾಪ್ತಿಯಲ್ಲಿ ವಾಡಿಕೆಯಂತೆ ಮಳೆಯಾಗಿಲ್ಲ. ಪರಿಣಾಮ ರಾಗಿ ಹಾಗೂ ಮುಸುಕಿನ ಜೋಳ ಸೇರಿದಂತೆ ಬಿತ್ತನೆಗೊಂಡಿರುವ ಎಲ್ಲ ಬೆಳೆಗಳು ಬಾಡಲಾರಂಭಿಸಿದ್ದು ರೈತರ ಬದುಕು ಸಂಕಷ್ಟದಲ್ಲಿ ಸಿಲುಕಿದೆ. ರಾಜ್ಯ ಸರ್ಕಾರ ಇತ್ತ ಗಮನಹರಿಸಿ ರೈತರ ನೆರವಿಗೆ ನಿಲ್ಲಬೇಕು ಎಂದು ಮನವಿ ಮಾಡಿದರು.
ತೋಟಿಕೆರೆ ಏತನೀರಾವರಿ ಯೋಜನೆಯ ಕಾಮಗಾರಿ ಅಂತಿಮ ಹಂತದಲ್ಲಿದೆ. ಇನ್ನು ಕಬ್ಬಳಿ ಕೆರೆಗೆ ಪೈಪ್‌ಲೈನ್ ಹಾಗೂ ಇತರೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಶೀಘ್ರದಲ್ಲಿಯೇ ಚಾಲನೆ ದೊರೆಯಲಿದೆ. ಗಡಿ ಭಾಗದ ಅಭಿವೃದ್ಧಿಗೆ ಹೆಚ್ಚಿನ ಯೋಜನೆಗಳನ್ನು ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷರಾದ ರಘುರಾಮ್, ವಳಗೇರಹಳ್ಳಿ
ಮಂಜೇಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಪುಟ್ಟರಾಜು, ಎಂ.ಆರ್.ವಾಸು, ದಿಡಗ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಿಂಗೇಗೌಡ, ಮಾಜಿ ಅಧ್ಯಕ್ಷ ಎಸ್.ಕುಮಾರ್. ಗ್ರಾಮ ಪಂಚಾಯಿತಿ ಸದಸ್ಯ ಆನಂದ್, ಎಪಿಎಂಸಿ ಕಾರ್ಯದರ್ಶಿ ಎಚ್.ಎ.ಸೋಮಶೇಖರಪ್ಪ, ಗುತ್ತಿಗೆದಾರ ಎಚ್.ಕೆ.ರಘು, ಪ್ರಮುಖರಾದ ಗವೀಶ್, ಮೋಹನ್ ನಾಗ್, ಬಾಬು ಹಾಗೂ ಇತರರು ಇದ್ದರು.