ಹಾಸನ, ಮಾರ್ಚ್1:ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಇಂದು ಹಾಸನ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಕೆಡಿಪಿ (ಕಡಿಮೆ ಆದಾಯ ಯೋಜನೆ) ಸಭೆ ನಡೆಯಿತು. ಸಭೆಯಲ್ಲಿ ಜೆಡಿಎಸ್ ಶಾಸಕರಾದ ಸಿ.ಎನ್. ಬಾಲಕೃಷ್ಣ ಮತ್ತು ಎಚ್.ಪಿ. ಸ್ವರೂಪ್‌ಪ್ರಕಾಶ್ ಭಾಗವಹಿಸಿದರು.
ಸಭೆಗೆ ಇಬ್ಬರು ಶಾಸಕರು ಒಟ್ಟಿಗೆ ಆಗಮಿಸುತ್ತಿದ್ದಂತೆ, ಸಚಿವ ರಾಜಣ್ಣ ಅವರು “ಇಬ್ಬರೂ ಒಟ್ಟಿಗೇ ಬಂದ್ರಾ?” ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶಾಸಕ ಸ್ವರೂಪ್‌ಪ್ರಕಾಶ್, “ಇಲ್ಲ, ಬೇರೆ ಬೇರೆ ಬಂದ್ವಿ” ಎಂದರು. ಆದರೆ ಇಬ್ಬರೂ ಒಂದೇ ತರಹದ ಶರ್ಟ್ ಧರಿಸಿದ್ದನ್ನು ಗಮನಿಸಿದ ಸಚಿವರು, “ಒಂದೇ ಥರದ ಶರ್ಟ್ ಹಾಕಿಕೊಂಡು ಬಂದಿದೀರಲ್ಲಾ, ಅದಕ್ಕೆ ಕೇಳ್ದೆ” ಎಂದು ಹಾಸ್ಯ ಚಟಾಕಿ ಹೊಡೆದರು.
ಈ ಸಂದರ್ಭದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಅವರು ಸಚಿವ ರಾಜಣ್ಣಗೆ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಮುಂದುವರಿಯುವಂತೆ ಮನವಿ ಮಾಡಿದರು. “ಮಾಧ್ಯಮಗಳಲ್ಲಿ ನೀವು ಬದಲಾಗುತ್ತಾರೆ ಅಂಥ ಸುದ್ದಿ ಬರುತ್ತಿದೆ. ನೀವೇ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೆ ಕೆಲಸಗಳಾಗುತ್ತವೆ” ಎಂದು ಅವರು ಹೇಳಿದರು.
ಈ ಮಾತಿಗೆ ಪ್ರತಿಕ್ರಿಯಿಸಿದ ಸಚಿವ ಕೆ.ಎನ್. ರಾಜಣ್ಣ, “ನಾನು ಹಾಸನ ಬೇಡ ಎಂದು ಬರೆದು ಕೊಟ್ಟು ಒಂದೂವರೆ ತಿಂಗಳಾಗಿದೆ” ಎಂದರು. ಇದನ್ನು ಕೇಳಿದ ಶಾಸಕ ಬಾಲಕೃಷ್ಣ, “ನಮ್ಮ ಜಿಲ್ಲೆಯಲ್ಲಿ ನೀವೇ ಮುಂದುವರಿಯಿರಿ, ನಿಮ್ಮ ಸಹಕಾರದಿಂದ ಜಿಲ್ಲೆಯ ಜನರಿಗೆ ಅನುಕೂಲ ಆಗುತ್ತೆ. ನೀವು ಅದನ್ನು ಪ್ರಸ್ತಾಪ ಮಾಡಬೇಡಿ, ದಯವಿಟ್ಟು ಮುಂದುವರಿಯಿರಿ. ನೀವಾಗಿಯೇ ಅದರ ಪ್ರಸ್ತಾಪ ಮಾಡಬೇಡಿ” ಎಂದು ಮನವಿ ಮಾಡಿದರು.
ಈ ಬಗ್ಗೆ ಸಚಿವ ರಾಜಣ್ಣ ಸ್ಪಷ್ಟನೆ ನೀಡುತ್ತಾ, “ನಾನು ಇದಕ್ಕೆ ಸಂಬಂಧಪಟ್ಟಂತೆ ಬರೆದು ಕೊಟ್ಟಿದ್ದೇನೆ” ಎಂದು ಉತ್ತರಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ, ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭಾಗವಹಿಸಿದ್ದರು.