ಹಾಸನ:ಅರಕಲಗೂಡು ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಸೋಲಾದ ಹಿನ್ನೆಲೆಯಲ್ಲಿ ವಿಪ್ ಉಲ್ಲಂಘಿಸಿದ ಸದಸ್ಯರ ವಿರುದ್ಧ ಶಾಸಕ ಎ.ಮಂಜು ಕಿಡಿಕಾರಿದರು.
ಮತದಾನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಜೆಡಿಎಸ್ ನ ತಲಾ ಆರು ಸದಸ್ಯರಿದ್ದು ಬಹುಮತ ಇತ್ತು. ಹೀಗಾಗಿ ವಿಪ್ ಜಾರಿಗೊಳಿಸಲಾಗಿತ್ತು. ವಿಪ್ ಉಲ್ಲಂಘಿಸಿದ ಸದಸ್ಯರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಕಾಂಗ್ರೆಸ್ ನವರು ನಮ್ಮ ಪಕ್ಷದ ಮಹಿಳಾ ಸದಸ್ಯರ ಪತಿ ಮೇಲೆ ಹಲ್ಲೆ ನಡೆಸಿ ಹೆದರಿಸಿ ಹೊತ್ತೊಯ್ದಿದ್ದಾರೆ. ಈ ರೀತಿಯ ಬೆದರಿಕೆ ರಾಜಕಾರಣ ಒಳ್ಳೆಯದಲ್ಲ. ಇದಕ್ಕೆ ತಕ್ಕಪಾಠ ಕಲಿಸಲಾಗುವುದು ಎಂದು ಗುಡುಗಿದ ಎ. ಮಂಜು, ರಾಜ್ಯದಲ್ಲಿ ಸದ್ಯದಲ್ಲೇ ಸರ್ಕಾರ ಬದಲಾಗಲಿದೆ. ಇಲ್ಲಿಯೂ ಇನ್ನೆರಡು ತಿಂಗಳಲ್ಲಿ ಪಪಂ ಆಡಳಿತದ ಚುಕ್ಕಾಣಿ ಹಿಡಿಯುವುದು ಶತಸಿದ್ದ ಎಂದು ಹೇಳಿದರು.