ಗರಂ ಆಗಿರುವ ಶಾಸಕ ಎ.ಮಂಜು ಕೂಲ್ ಮಾಡಲು ಎಚ್.ಡಿ.ರೇವಣ್ಣ ಸರ್ಕಸ್; ಎಂ.ಟಿ. ಕೃಷ್ಣೇಗೌಡ ಭೇಟಿ ಮಾಡಿದ ಪ್ರಜ್ವಲ್ ನಡೆಗೆ ಆಕ್ರೋಶ

ಎ.ಮಂಜು ಜತೆ ಬಹುಸುತ್ತಿನ ಮಾತುಕತೆ ನಡೆಸುತ್ತಿರುವ ವರಿಷ್ಠರ ಕುಟುಂಬ

ಹಾಸನ: ತಮ್ಮ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದ ಸ್ವತಂತ್ರ ಅಭ್ಯರ್ಥಿಯನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆಗೆ ಬೆಂಬಲ ಕೋರಿರುವ ಸಂಸದ ಪ್ರಜ್ವಲ್‌ರೇವಣ್ಣ ವಿರುದ್ಧ ಶಾಸಕ ಎ.ಮಂಜು ತೀವ್ರ ಅಸಮಾಧಾನಗೊಂಡಿದ್ದಾರೆ. ಅವರನ್ನು ತಣ್ಣಗಾಗಿಸಲು ಮಾಜಿ ಸಚಿವ ರೇವಣ್ಣ ಸಂಧಾನ ಆರಂಭಿಸಿದ್ದಾರೆ.

ಎ.ಮಂಜು ಮನವೊಲಿಸಲು ಜೆಡಿಎಸ್ ನಾಯಕರು ಸರ್ವ ಪ್ರಯತ್ನ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಶಾಸಕ ಎ.ಮಂಜು ಗಮನಕ್ಕೆ ತಾರದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎ.ಮಂಜು ವಿರುದ್ದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದ ಎಂ.ಟಿ.ಕೃಷ್ಣೇಗೌಡರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದರು.

ಈ ವಿಷಯ ತಿಳಿದು ಶಾಸಕ ಎ.ಮಂಜು ಅಸಮಾಧಾನಗೊಂಡು ಜೆಡಿಎಸ್ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು. ಸಂಸದ ಪ್ರಜ್ವಲ್‌ರೇವಣ್ಣ ವಿರುದ್ಧ ಅಸಮಾಧಾನಗೊಂಡಿದ್ದ ಎ.ಮಂಜು ಅವರ ಮನೆಗೆ ಮಾಜಿಸಚಿವ ಎಚ್.ಡಿ.ರೇವಣ್ಣ ಕುಟುಂಬ ಎಡತಾಕುತ್ತಿದೆ.

ಮಾ.10 ರಂದು ಅರಕಲಗೂಡು ತಾಲ್ಲೂಕಿನ, ಹನ್ಯಾಳು ಗ್ರಾಮದಲ್ಲಿರುವ ಎ.ಮಂಜು ನಿವಾಸಕ್ಕೆ ಸಂಸದ ಪ್ರಜ್ವಲ್‌ರೇವಣ್ಣ, ಭವಾನಿರೇವಣ್ಣ ಹಾಗೂ ಶಾಸಕ ಸ್ವರೂಪ್‌ಪ್ರಕಾಶ್ ತೆರಳಿ ಮಾತುಕತೆ ನಡೆಸಿ ವಾಪಾಸ್ಸಾಗಿದ್ದರು.

ಈ ಸಂದರ್ಭದಲ್ಲಿ ಶಾಸಕ ಎ.ಮಂಜು ಸಂಸದರ ಎದುರು ಆಕ್ರೋಶ ಹೊರಹಾಕಿದ್ದರು. ಆದಾದ ಬಳಿಕ ಕಳೆದ ಭಾನುವಾರ ಬೆಂಗಳೂರಿನ ಎ.ಮಂಜು ನಿವಾಸದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಔತಣಕೂಟ ಏರ್ಪಡಿಸಿ, ಆ ನೆಪದಲ್ಲಿ ಸುಮಾರು ಅರ್ಧ ಗಂಟೆ ಕಾಲ ಚರ್ಚೆ ನಡೆಸಿ ಎ.ಮಂಜು ಮನವೊಲಿಸಿದ್ದರು.

ನಿನ್ನೆ ಅರಕಲಗೂಡು ತಾಲ್ಲೂಕಿನ ಹನ್ಯಾಳು ಗ್ರಾಮದ ಎ.ಮಂಜು ನಿವಾಸಕ್ಕೆ ತೆರಳಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸುಮಾರು ಒಂದೂವರೆ ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಎಚ್.ಡಿ.ರೇವಣ್ಣಗೆ ಶಾಸಕ ಸಿ.ಎನ್.ಬಾಲಕೃಷ್ಣ ಸಾಥ್ ನೀಡಿದ್ದು, ಎ.ಮಂಜು ಅಸಮಾಧಾನ ತಣ್ಣಗಾಗಿಸಲು ಜೆಡಿಎಸ್ ನಾಯಕರ ಸರ್ವ ಪ್ರಯತ್ನ ನಡೆಸುತ್ತಿದ್ದಾರೆ.