ಹಾಸನ: ನಗರದ ಡಾ.ಎ ಪಿ ಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಈದ್ಗಾದಲ್ಲಿ ಇಂದು ರಂಝಾನ್ ಹಬ್ಬದ ವಿಶೇಷ ಪ್ರಾರ್ಥನೆ ಸಂದರ್ಭದ ಪ್ರವಚನದಲ್ಲಿ ಧರ್ಮಗುರು ಮೌಲ್ವಿ ನಿಸಾರ್ ಸಾಹೇಬ್ ಅವರು ಕಳೆದ ಒಂದು ತಿಂಗಳು ಉಪವಾಸ ಆಚರಣೆಯಲ್ಲಿ ತೊಡಗಿ ದೈವಾನುಗ್ರಹದ ಕೃಪೆಗೆ ಪಾತ್ರರಾದ ಮುಸ್ಲಿಂ ಸಮುದಾಯವನ್ನು ಅಭಿನಂದಿಸಿದರು.
ಇಸ್ಲಾಂ ಧರ್ಮದ ತತ್ವ ಪಾಲಿಸಿ:
ಇಸ್ಲಾಂ ಧರ್ಮದ ತತ್ವಗಳನ್ನು ಜೀವನದ ಪ್ರತಿಯೊಂದೂ ಸಂದರ್ಭದಲ್ಲಿ ಪಾಲಿಸಿ, ಪ್ರವಾದಿ ತೋರಿಸಿದ ಹಾದಿಯಲ್ಲಿ ನಿಷ್ಠೆಯಿಂದ ನಡೆದುಕೊಂಡರೆ ಇಹ ಹಾಗೂ ಪರಲೋಕದಲ್ಲೂ ಸತ್ಫಲ ದೊರೆಯುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಮುಸ್ಲಿಮನೂ ನಿರಂತರ ಪ್ರಯತ್ನಿಸಬೇಕೆಂದು ತಿಳಿಸಿದರು.
ವಕ್ಫ್ ಮಸೂದೆ ಗದಾಪ್ರಹಾರದ ವಿರುದ್ಧ ಶಾಂತಿಯುತ ಹೋರಾಟ ಅಗತ್ಯ;
ಮುಸ್ಲಿಂ ಸಮುದಾಯವು ಜಾಗತಿಕವಾಗಿ ಹಾಗೂ ನಮ್ಮ ದೇಶದಲ್ಲೂ ಅನೇಕ ರೀತಿಯ ಸವಾಲುಗಳನ್ನು ಎದುರಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಸ್ಲಾಂ ತತ್ವಗಳ ತಳಹದಿಯ ಆಧಾರದಲ್ಲೇ ಇವುಗಳನ್ನು ಎದುರಿಸಬೇಕಾಗಿದೆ.
ಕೇಂದ್ರ ಸರ್ಕಾರವು ಜಾರಿ ಮಾಡಲು ಪ್ರಯತ್ನಿಸುತ್ತಿರುವ ವಕ್ಫ್ ಮಸೂದೆಯು ಭಾರತದ ಮುಸ್ಲಿಮರ ವಿರುದ್ಧ ಒಂದು ಹೊಸ ಗದಾ ಪ್ರಹಾರವಾಗಿದೆ. ಇದನ್ನು ನಾವು ಒಗ್ಗಟ್ಟಾಗಿ ಎದುರಿಸಬೇಕಿದೆ. ಇದರ ವಿರುದ್ದದ ಹೋರಾಟದ ವೇಳೆ ಇಸ್ಲಾಂ ಧರ್ಮ ತೋರಿಸುವ ಶಾಂತಿ ಮಾರ್ಗದ ಮೂಲಕವೇ ಹೋರಾಡಬೇಕು. ಯಾವುದೇ ಕಾರಣಕ್ಕೂ ಹಿಂಸಾ ಮಾರ್ಗವನ್ನು ತುಳಿಯದೆ ಧರ್ಮದ ಘನತೆಯನ್ನು ತೋರಿಸಿಕೊಡಬೇಕು ಎಂದರು.
ಮುಸ್ಲಿಮರ ಓಟಿಗಾಗಿ ಕಾಳಜಿ ತೋರಿಸುವ ಪಕ್ಷಗಳಿಗೆ ಪಾಠ ಕಲಿಸಬೇಕಾಗುತ್ತದೆ:
ವಕ್ಫ್ ಮಸೂದೆಗೆ ಸಂಬಂಧಿಸಿದಂತೆ ಜಾತ್ಯತೀತ ಪಕ್ಷಗಳ ನಡುವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಎಷ್ಟರಮಟ್ಟಿಗೆ ಈ ಪಕ್ಷಗಳು ಮುಸ್ಲಿಂ ಸಮುದಾಯದ ಪರವಾಗಿ ನೈಜ ಕಾಳಜಿ ಹೊಂದಿವೆಯೇ? ಅಥವಾ ಕೇವಲ ನಮ್ಮ ಸಮುದಾಯದ ಓಟಿಗಾಗಿ ತೋರಿಕೆಯ ಕಾಳಜಿಯೇ? ಎಂಬುದನ್ನು ಇಡೀ ಮುಸ್ಲಿಂ ಸಮುದಾಯ ನಿರ್ಧರಿಸಿ ಸರಿಯಾದ ಸಮಯಕ್ಕೆ ಅವರಿಗೆ ಪಾಠ ಕಲಿಸಬೇಕಾಗುತ್ತದೆ ಎಂದು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದರು.
ಹಾದಿ ತಪ್ಪುತ್ತಿರುವ ಮುಸ್ಲಿಂ ಯುವ ಸಮುದಾಯ: ಕಳವಳ
ಮುಸ್ಲಿಂ ಸಮುದಾಯದ ಯುವಕರು ಹಾದಿ ತಪ್ಪುತ್ತಿದ್ದಾರೆ. ಬಹಳಷ್ಟು ಯುವಕರು ಮಾದಕ ವ್ಯಸನಿಗಳಾಗಿದ್ದಾರೆ. ಅವರು ಇಡೀ ಸಮಾಜಕ್ಕೆ ಕಂಟಕರಾಗುವುದರ ಜತೆಗೆ ಮುಸ್ಲಿಂ ಸಮುದಾಯಕ್ಕೂ ಕೆಟ್ಟ ಹೆಸರು ತರುತ್ತಿರುವುದು ದುರದೃಷ್ಟಕರ. ಇದಲ್ಲದೆ ಪ್ರಾಣ ಕಂಟಕವಾದ ದ್ವಿಚಕ್ರ ವಾಹನಗಳ ವ್ಹಿಲಿಂಗ್ ಚಟಕ್ಕೆ ನಮ್ಮ ಯುವಕರು ಅಮೂಲ್ಯವಾದ ಪ್ರಾಣ ಕಾಳೆದುಕೊಳ್ಳುತ್ತಿದ್ದಾರೆ. ಬೇರೆಯವರಿಗೂ ಇದರಿಂದ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಪೋಷಕರು ತಮ್ಮ ಮಕ್ಕಳು ಮಾದಕ ವಸ್ತುಗಳ ದಾಸರಾಗದಂತೆ, ವ್ಹಿಲಿಂಗ್ ನಂಥ ದುಷ್ಕೃತ್ಯಗಳಲ್ಲಿ ತೊಡಗದಂತೆ ಎಚ್ಚರವಹಿಸಬೇಕೆಂದು ಕಿವಿಮಾತು ಹೇಳಿದರು.