ಹಾಸನ: ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಹೊಳೆನರಸೀಪುರ ತಾಲ್ಲೂಕಿನ, ಅಗ್ರಹಾರ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ತಮ್ಮ ಹುಟ್ಟುಹಬ್ಬ ಸಮಾರಂಭದಲ್ಲಿನ ಭಾಷಣದಲ್ಲಿ ಆಕ್ಷೇಪಾರ್ಹ ಪದ ಬಳಸಿದ್ದು, ಪೆನ್ ಡ್ರೈವ್ ಹಂಚಿಕೆ ವಿಷಯ ಪ್ರಸ್ತಾಪಿಸಿ ಮತ್ತೊಮ್ಮೆ ಸಂಸದ ಶ್ರೇಯಸ್ ಪಟೇಲ್ ಅವರನ್ನು ಕೆಣಕಿದ್ದಾರೆ.
ಹಾಸದಲ್ಲಿರೋದು ಎರಡೇ ಪಕ್ಷ:
ಹಾಸನದಲ್ಲಿ ಯಾವುದೇ ಪಕ್ಷ ಇಲ್ಲ, ಇರುವುದು ಎರಡೇ ಪಕ್ಷ, ಒಂದು ದೇವೇಗೌಡರ ಪರ, ಇನ್ನೊಂದು ದೇವೇಗೌಡರ ವಿರುದ್ಧ ಎಂದು ನಮ್ಮ ತಾತಾ ಹೇಳುತ್ತಿದ್ದರು. ಈಗ ಅದು ನನಗೆ ಅನುಭವ ಆಗುತ್ತಿದೆ ಎಂದು ಸೂರಜ್ ಹೇಳಿದರು.
ನನಗೆ ತುಂಬಾ ಹುಷಾರಿಲ್ಲ, ಸೋಕಾದ ರೀತಿ ಆಗಿತ್ತು, ಅದಕ್ಕೆ ದೃಷ್ಟಿ ತೆಗೆಸಿದರು. ನಾಯಿಕಣ್ಣು, ನರಿ ಕಣ್ಣು, ಕೆಟ್ಟ ಮುಂ***ಯರ ಕಣ್ಣು ಅಂತ ದೃಷ್ಟಿ ತೆಗೆದರು. ನಾನು ಮನಸ್ಸಿನಲ್ಲಿ ಅಂದುಕೊಂಡೆ ಕೆಟ್ಟ ಸೂ**ಯರ ಕಣ್ಣು ಅಂತ ಏಕೆ ಹೇಳಲಿಲ್ಲ ಅಂತ ಎಂದು ಬಹಿರಂಗ ಆಕ್ಷೇಪಾರ್ಹ ಪದ ಬಳಸಿದರು.
ನಂತರ ಅದಕ್ಕೆ ಸ್ಪಷ್ಟನೆ ನೀಡಿದ ಅವರು, ಮಹಿಳೆಯರ ಬಗ್ಗೆ ತಪ್ಪು ರೀತಿ ಮಾತನಾಡುತ್ತಿಲ್ಲ. ದೇವೇಗೌಡರ ವಿರುದ್ಧ ಅಂತ ಬಿಂಬಿಸಿಕೊಳ್ಳದೆ ಪಾರ್ಟಿ ಒಳಗೇ ಇದ್ದು ಮೋಸ ಮಾಡಿದವರಿಗೆ ಈ ಮಾತು ಹೇಳಿದೆ. ಕೆಟ್ಟ ಸೂ**ಯರ ಕಣ್ಣು ತೆಗೆದು ಬಿಡವ್ವ ಅಂತ ಹೇಳಿದೆ. ಇದು ಯಾವುದೇ ಹೆಣ್ಣುಮಕ್ಕಳ ವಿಷಯ ಇಲ್ಲ ಎಂದರು.
ನಾಟಕ ಆಡಿಕೊಂಡು ಅವರು ಬಂದು, ನಮಗೆ ಹಾಲು ಕೊಟ್ಟು ಜೊತೆಯಲ್ಲೇ ಇರ್ತೆವೆ ಅಂತಾರೆ. ಇನ್ನೊಬ್ಬರು ಬಂದಾಗಲೂ ಹಾಲು ಕೊಡ್ತಾರೆ. ನಾನು ನಿನ್ನೆ, ಮೊನ್ನೆ ಪೆನ್‌ಡ್ರೈವ್ ಹಂಚಿ ಎಂಎಲ್‌ಸಿ ಆಗಿಲ್ಲ ಎಂದರು.
ಯಾವುದೇ ಇಲಾಖೆಯಲ್ಲಿ ನಮ್ಮ ಕಾರ್ಯಕರ್ತರಿಗೆ ತೊಂದರೆ ಆದರೆ ನನ್ನ ಗಮನಕ್ಕೆ ತನ್ನಿ. ಯಾರು ಬರ್ತಾರೋ, ಬಿಡ್ತಾರೋ ಈ ಸೂರಜ್‌ರೇವಣ್ಣ ಬರ್ತಾನೆ. ಯಾವುದೇ ಜಾತಿ, ಜನಾಂಗ ನೋಡಬೇಡ, ಎಲ್ಲಾ ಹಳ್ಳಿಗಳಿಗೂ ಒಳ್ಳೆಯದು ಮಾಡು ಎಂದು ನಮ್ಮ ತಾತ ಹೇಳಿದ್ದಾರೆ. ಒಮ್ಮೆ ಒಂದು ಸಮುದಾಯ ಕೈಬಿಡಬಹುದು. ಆದರೆ ಅರ್ಥ ಆದ ಬಳಿಕ ನಿನ್ನ ಕೈ ಹಿಡಿತಾರೆ ಎಂದು ಹೇಳಿದ್ದಾರೆ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಜಾತಿ ಎನ್ನುವ ವಿಷ ಬೀಜ ಬಿತ್ತಿ ಅಗ್ರಹಾರದಲ್ಲಿ ಮತ ಪಡೆದರು. ರೇವಣ್ಣ ಅವರು ಎಷ್ಟು ದೇವಸ್ಥಾನ ಕಟ್ಟಿದ್ದಾರೆ ಆ ನಂಬರ್ ಸಂಸದರಿಗೆ ಗೊತ್ತಾ? ಕೇಳಿಕೊಂಡು ಬರಲು ಹೇಳಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡದ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ವಿರುದ್ಧ ಎಂಎಲ್‌ಸಿ ಸೂರಜ್‌ರೇವಣ್ಣ ಕಿಡಿಕಾರಿದರು.