ಹಾಸನ, ಏಪ್ರಿಲ್ 16, 2025: ರಾಜ್ಯ ಸರ್ಕಾರದ ಜಾತಿಗಣತಿ ವರದಿಯ ವಿರುದ್ಧ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ವರದಿಯನ್ನು “ಯಾರನ್ನೋ ಕೂರಿಸಿ ಬರೆಸಿದಂತೆ” ಇದೆ ಎಂದು ಲೇವಡಿ ಮಾಡಿದರು. “ವೈಜ್ಞಾನಿಕ ದತ್ತಾಂಶವಿಲ್ಲ, ಸಾಕ್ಷ್ಯವಿಲ್ಲ. ನಿವೃತ್ತ ಐಎಎಸ್, ಕೆಎಎಸ್ ಅಧಿಕಾರಿಗಳನ್ನು ಕೂರಿಸಿಕೊಂಡು ಬರೆಸಿರುವಂತಿದೆ,” ಎಂದು ಆರೋಪಿಸಿದರು.
“ಜಾತಿಗಣತಿ ಉದ್ದೇಶ ಒಂದು ಸಮಾಜದ ಏಳಿಗಾಗಿ ಇರಬೇಕು. ಆದರೆ, ಇದು ಜಾತಿಗಳನ್ನು ಒಡೆದು, ರಾಜಕೀಯ ಸ್ವಾರ್ಥಕ್ಕಾಗಿ ಬಳಕೆಯಾಗುತ್ತಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸೀಟುಗಳು ಬರಬೇಕೆಂಬ ಉದ್ದೇಶವಷ್ಟೇ ಕಾಣುತ್ತದೆ. ಇದು ರಾಜ್ಯಕ್ಕೆ ಒಳ್ಳೆಯ ಬೆಳವಣಿಗೆಯಲ್ಲ,” ಎಂದು ಸೂರಜ್ ರೇವಣ್ಣ ಹೇಳಿದರು. ಗ್ಯಾರೆಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಕುಸಿದಿದೆ ಎಂದೂ ಅವರು ಟೀಕಿಸಿದರು.
ಕುಮಾರಸ್ವಾಮಿ ಜಮೀನು ವಿವಾದ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಜಮೀನು ಒತ್ತುವರಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ, ಸೂರಜ್ ರೇವಣ್ಣ, “ಈ ವಿಷಯ ಕೋರ್ಟ್‌ನಲ್ಲಿ ಸ್ಟೇ ಆಗಿದೆ. ಮುಂದಿನ ಕಾನೂನು ಪ್ರಕ್ರಿಯೆ ನಡೆಯುತ್ತದೆ. ಕುಮಾರಸ್ವಾಮಿ ಒಬ್ಬರನ್ನಷ್ಟೇ ಅಲ್ಲ, ನಮ್ಮ ಇಡೀ ಕುಟುಂಬವನ್ನೇ ಗುರಿಯಾಗಿಸಲಾಗಿದೆ. ಜೆಡಿಎಸ್‌ನ ಪ್ರತಿಯೊಬ್ಬ ಶಾಸಕರನ್ನೂ ಟಾರ್ಗೆಟ್ ಮಾಡಲಾಗುತ್ತಿದೆ. ರಾಜ್ಯದ ಜನ ಎಲ್ಲವನ್ನೂ ನೋಡುತ್ತಿದ್ದಾರೆ,” ಎಂದು ಆರೋಪಿಸಿದರು.
“ಜಾತಿ ಓಲೈಕೆ ರಾಜಕಾರಣ ಮತ್ತು ಸಮಾಜವನ್ನು ಒಡೆಯುವ ರಾಜಕೀಯಕ್ಕೆ ಸರ್ಕಾರ ಕೈಹಾಕಿದೆ. ಇದು ಒಟ್ಟಾರೆಯಾಗಿ ತಪ್ಪು ಕ್ರಮ,” ಎಂದರು.