ಬಿಜೆಪಿ ದಲಿತ, ಅಂಬೇಡ್ಕರ್ ವಿರೋಧಿ ಅಲ್ಲ: ಛಲವಾದಿ ನಾರಾಯಣಸ್ವಾಮಿ

ಮೀಸಲಾತಿಯನ್ನು ಯಾವುದೇ ಕಾರಣಕ್ಕೆ ತೆಗೆಯಲ್ಲ| ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ.

ಹಾಸನ: ಬಿಜೆಪಿ ದಲಿತ, ಅಂಬೇಡ್ಕರ್ ವಿರೋಧಿ ಅಲ್ಲ, ದೇಶದಲ್ಲಿ ಕಾಂಗ್ರೆಸ್ ಮಾತ್ರವೇ ದಲಿತ ವಿರೋಧಿ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ರಾಜ್ಯದಲ್ಲಿ, ದೇಶದಲ್ಲಿ ಕಾಂಗ್ರೆಸ್ ಪಕ್ಷ ದಲಿತರನ್ನು ಓಟು ಬ್ಯಾಂಕ್ ಆಗಿ ಮಾಡಿಕೊಂಡಿದೆ. ದೇಶದಲ್ಲಿ ದಲಿತರಿಗೆ ಬಹಳ ಉದ್ದಾರ ಮಾಡಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ಅಂಬೇಡ್ಕರ್‌ರಿಂದ ಹಿಡಿದು ಎಲ್ಲರಿಗೂ ಅವಮಾನ ಮಾಡಿದ್ದಾರೆ. ಬರೀ ಮೊಸಳೆ ಕಣ್ಣೀರು ಹಾಕುತ್ತಾರೆ. ದಲಿತರಿಗೆ ಬಿಜೆಪಿ ಆಗೋದಿಲ್ಲ, ಅಂಬೇಡ್ಕರ್ ವಿರೋಧಿ ಎಂದು ದಾರಿ ತಪ್ಪಿಸುತ್ತಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಮೀಸಲಾತಿಯನ್ನು ಯಾವುದೇ ಕಾರಣಕ್ಕೆ ತೆಗೆಯಲ್ಲ, ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ತಿದ್ದುಪಡಿಗಳನ್ನು ಮಾಡಲ್ಲ ಎಂದು ಪ್ರಧಾನಮಂತ್ರಿ ಅವರೇ ಹೇಳಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದಲ್ಲಿ 28 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಕಳೆದ ಬಾರಿ 25+1 ಸ್ಥಾನ ಗೆದ್ದಿದ್ದೆವು. ಕಾಂಗ್ರೆಸ್-ಜೆಡಿಎಸ್ ಸೇರಿ ಚುನಾವಣೆ ಮಾಡಿದ್ದರು.‌‌ಈ ಬಾರಿ ಬಿಜೆಪಿ ಜೊತೆ ಜೆಡಿಎಸ್ ಸೇರಿದೆ. 28 ಕ್ಕೆ 28 ಗೆಲ್ತಿವಿ ಎನ್ನುವ ವಿಶ್ವಾಸ ಇದೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ, ಆದರೆ ಮೋದಿಯವರ ಅಲೆಯಲ್ಲಿ ಚಿಂತಾಕ್ರಾಂತರಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆ ಇದೆ. ಇದು ದೇಶದ ಚುನಾವಣೆ, ದೇಶದ ಅಭಿವೃದ್ಧಿ, ಭದ್ರತೆ ಮೇಲೆ ಚುನಾವಣೆ ನಡೆಯುತ್ತಿದೆ ಎಂದರು.

ಕಾಂಗ್ರೆಸ್ ರಾಜ್ಯದ ವಿಚಾರಗಳನ್ನೇ ಇಟ್ಟುಕೊಂಡು ರಾಜಕಾರಣ ಮಾಡುತ್ತಿದೆ. ದೇಶದ ಬಗ್ಗೆ ಅವರು ಮಾತನಾಡುತ್ತಿಲ್ಲ. ಗ್ಯಾರೆಂಟಿ, ಮೋದಿ ಅವರನ್ನು ಬೈಯ್ಯುವುದನ್ನು ಬಿಟ್ಟರೆ ಬೇರೆ ವಿಚಾರ ಇಲ್ಲ. ಇದು ದೇಶದ ಚುನಾವಣೆ ಅನ್ನೋದು ಜನರಿಗೆ ಗೊತ್ತಿದೆ. ಈಗ ದೇಶ ಸುಭದ್ರವಾಗಿದೆ, ಇತರ ದೇಶಗಳು ನಮ್ಮ ಕಡೆ ನೋಡುತ್ತಿವೆ. ಆರ್ಥಿಕ ಪರಿಸ್ಥಿತಿ ಮೂರನೇ ಸ್ಥಾನದಲ್ಲಿದೆ ಎಂದರು.

ಈ ಎಲ್ಲಾ ಕಾರಣಗಳಿಂದ ಮೋದಿಯವರನ್ನು ಮೂರನೇ ಬಾರಿ ಆಯ್ಕೆ ಮಾಡುತ್ತಾರೆ ಎಂಬುದು ಕಾಣುತ್ತಿದೆ. ಹಿಂದೆ ಭ್ರಷ್ಟಾಚಾರ ನಡೆದರೆ ಬಯಲಿಗೆ ಬರುತ್ತಿರಲಿಲ್ಲ.ಎಲ್ಲವೂ ಕತ್ತಲೆ ಕೋಣೆಯೊಳಗೆ ನಡೆಯುತ್ತಿತ್ತು. ಇವತ್ತು ಮೋದಿಯವರಿಂದ ಪಾರದರ್ಶಕ ಆಡಳಿತ ನಡೆಯುತ್ತಿದೆ. ಮೋದಿ ಒಬ್ಬರು ನಿಷ್ಕಳಂಕ ರಾಜಕಾರಣಿ ಎಂದು ಶ್ಲಾಘಿಸಿದರು.

ದೇಶದ ಭದ್ರತೆಯ, ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ನಿರ್ಧಾರವನ್ನು ದೇಶವಾಸಿಗಳು ತೆಗೆದುಕೊಳ್ಳಬೇಕು. 400 ಕ್ಕೂ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಕಾಂಗ್ರೆಸ್ ಪಕ್ಷ ನಾಯಕತ್ವದಲ್ಲಿ ಇಲ್ಲದೆ ಸೊರಗಿ ಹೋಗಿದೆ. ಐವತ್ತು ವರ್ಷ ಕಾಂಗ್ರೆಸ್ ಇರುತ್ತೋ ಇರಲ್ವೋ ಗೊತ್ತಿಲ್ಲ. ಆದರೆ ಅಲ್ಲಿಯವರೆಗೆ ಅದು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ.