ಡಿಸಿ ವಿರುದ್ಧ ದೂರು ಬರೆದ ಗೌಡರ ಮೇಲೆ ಗೊಲ್ಲ ಸಮುದಾಯದ ಆಕ್ರೋಶ; ಸಮುದಾಯದ ಮಹಿಳೆಯನ್ನು ಮೂಲೆಗುಂಪು ಮಾಡಲು ಹೊರಟಿರುವ ದೇವೇಗೌಡ ಎಂದು ಅಸಮಾಧಾನ

ತುಮಕೂರು: ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌.ರಾಜಣ್ಣ ಮತ್ತು ಅಲ್ಲಿಯ ಜಿಲ್ಲಾಧಿಕಾರಿ ಸತ್ಯಭಾಮ ಒಂದೇ ಜಾತಿಯವರು ಎಂದು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಸತ್ಯಭಾಮ ಅವರನ್ನು ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ ಎಂದು ಗೊಲ್ಲ ಸಮುದಾಯದ ಮುಖಂಡರು ಸೋಮವಾರ ಆರೋಪಿಸಿದ್ದಾರೆ.

ಸತ್ಯಭಾಮ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದು, ವರ್ಗಾವಣೆ ಮಾಡಿ ಎಂದು ಆಯೋಗಕ್ಕೆ ದೂರು ನೀಡಿದ್ದಾರೆ. ಗೊಲ್ಲ ಸಮುದಾಯದ ಮಹಿಳೆಯನ್ನು ಮೂಲೆಗುಂಪು ಮಾಡಲು ಹೊರಟಿರುವ ದೇವೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮುದಾಯದ ಮಹಿಳೆಯನ್ನು ಅವಹೇಳನ ಮಾಡುತ್ತಿದ್ದಾರೆ. ಹಿಂದುಳಿದ ಸಮುದಾಯಕ್ಕೆ ಅಧಿಕಾರ ಕೊಡಬಾರದು ಎಂಬ ಉದ್ದೇಶದಿಂದ ಪತ್ರ ಬರೆದಿದ್ದಾರೆ ಎಂದು ಜಿಲ್ಲಾ ಗೊಲ್ಲ ಸಮಾಜ ವೇದಿಕೆಯ ಸಂಘಟನಾ ಕಾರ್ಯದರ್ಶಿ ಎಸ್.ಚಿಕ್ಕರಾಜು ದೂರಿದರು.

‘ಸತ್ಯಭಾಮ ಸರ್ಕಾರದ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ. ಕೆಳಹಂತದ ಅಧಿಕಾರಿಗಳ ಜತೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪರವಾಗಿ ಮತ ನೀಡುವಂತೆ ಕೇಳಿದ್ದಾರೆ’ ಎಂದು ದೂರು ಕೊಟ್ಟಿರುವುದು ಸರಿಯಲ್ಲ ಎಂದರು.

ಗೊಲ್ಲ ಸಮುದಾಯದ ನಾಗರಾಜು, ವಿರೂಪಾಕ್ಷ, ವೀರಣ್ಣ ಸಿದ್ದಾಪುರ, ಚಿನ್ನಪ್ಪ, ತಿಮ್ಮಣ್ಣ, ದಯಾನಂದ್, ರಮೇಶ್, ಗಂಗಾಧ‌ರ್ ಹಾಜರಿದ್ದರು.