ನ.15 ಅಥವಾ 16ರಂದು ಸಿದ್ದರಾಮಯ್ಯ ಸಿಎಂ ಸೀಟು ಖಾಲಿ ಮಾಡ್ತಾರೆ: ಆರ್.ಅಶೋಕ್ ಭವಿಷ್ಯ

ಹಾಸನ: ವಿಧಾನಸಭೆ  ವಿಪಕ್ಷ ನಾಯಕ ಆರ್. ಅಶೋಕ್ ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಲ್ಲದೇ, ಸಿಎಂ ಪದತ್ಯಾಗದ ಬಗ್ಗೆ ಭವಿಷ್ಯ ನುಡಿದಿದ್ದಾರೆ.

“ನ.15 ಅಥವಾ ನ.16 ರಂದು ಸಿದ್ದರಾಮಯ್ಯ ಅವರು ಖಾಲಿ ಮಾಡ್ತಾರೆ” ಎಂದು ಭವಿಷ್ಯ ನುಡಿದ ಅವರು, “ಅಷ್ಟರಲ್ಲಿ ಎಲ್ಲಾ ಗುಡಿಸಿ, ಗುಂಡಾಂತರ ಮಾಡಿ ಹೋಗ್ತಾರೆ. ಆಮೇಲೆ ಡಿ.ಕೆ. ಶಿವಕುಮಾರ್ ಬರ್ತಾರೋ, ಪರಮೇಶ್ವರ್ ಬರ್ತಾರೋ, ಜಾರಕಿಹೋಳಿ ಬರ್ತಾರೋ—ಯಾರೇ ಬಂದರೂ ಏನೂ ಸಿಗಲ್ಲ. ಎಲ್ಲ ಖಾಲಿ ಮಾಡಿ ಹೋಗಿರ್ತಾರೆ” ಎಂದು ಸರ್ಕಾರದ ಆಡಳಿತ ಶೈಲಿಯನ್ನು ತರಾಟೆಗೆ ತೆಗೆದುಕೊಂಡರು.

“ಇಂತಹ ದರಿದ್ರ ಸರ್ಕಾರ, ಪಾಪರ್ ಆಗಿರುವ ಸರ್ಕಾರವನ್ನು ಕರ್ನಾಟಕ ನೋಡಿಲ್ಲ”

ರಾಜ್ಯ ಸರ್ಕಾರದ ತೆರಿಗೆ ನೀತಿಗಳನ್ನು ಪ್ರಶ್ನಿಸಿದ ಅವರು, “ಎಲ್ಲದರ ಮೇಲೂ ಟ್ಯಾಕ್ಸ್ ಹಾಕುತ್ತಿದ್ದಾರೆ. ಗಾಳಿ ಒಂದನ್ನು ಬಿಟ್ಟಿದ್ದಾರೆ ಅಷ್ಟೇ” ಎಂದು ವ್ಯಂಗ್ಯವಾಡಿದರು.

ಕಾನೂನು ಸುವ್ಯವಸ್ಥೆಯ ಬಗ್ಗೆಯೂ ಗಂಭೀರ ಆರೋಪ:
ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಮೇಲೂ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ:

  • “ಅಧಿಕಾರಿ, ಕಂಟ್ರಾಕ್ಟರ್‌ಗಳು ಕೆಲಸಕ್ಕೆ ಹೋದರೆ ವಾಪಾಸ್ ಬರ್ತಾರೋ ಗ್ಯಾರಂಟಿ ಇಲ್ಲ.”
  • “ಮನೆಹಾಳು ಸರ್ಕಾರ ಇದು, ಇಂತಹ ಮನೆಹಾಳು ಸರ್ಕಾರ ಇತಿಹಾಸದಲ್ಲಿ ಬಂದಿಲ್ಲ.”
  • “ಪೊಲೀಸರು ದುಡ್ಡು ಕೊಟ್ಟು ವರ್ಗಾವಣೆ ದಂಧೆಯಲ್ಲಿ ಬಂದಿದ್ದಾರೆ. ಅವರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ.”
  • “ಮೈಕ್ರೋಫೈನಾನ್ಸ್‌ ಕಂಪನಿಗಳಿಗೆ ಪೊಲೀಸರು ಬೆಂಬಲ ನೀಡಿದ್ದಾರೆ, ಅವರ ಮೇಲೆ ಭಯವೇ ಇಲ್ಲ.”
  • “ಕೊಲೆ, ಅತ್ಯಾಚಾರ, ಕಳ್ಳತನ ನಡೆಯುತ್ತಲೇ ಇವೆ, ಆದರೆ ಪೊಲೀಸರ ಕಂಡರೆ ಯಾರಿಗೂ ಭಯವೇ ಇಲ್ಲ!”