ಪೊಲೀಸ್ ಸ್ಟೇಷನ್ ಕಾಂಗ್ರೆಸ್ ಕಚೇರಿಯಾಗಿವೆ; ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ

ಕಾಂಗ್ರೆಸ್ ಸರ್ಕಾರ ಬಂದರೆ ಕೋಮುವಾದಿ ಮುಸ್ಲಿಂರಿಗೆ ಹಬ್ಬ ಇದ್ದಂಗೆ

ಹಾಸನ: ರಾಜ್ಯದಲ್ಲಿ ಪೊಲೀಸ್ ಸ್ಟೇಷನ್‌ಗಳು ಕಾಂಗ್ರೆಸ್ ಕಚೇರಿಗಳಾಗಿ ಕೆಲಸ ಮಾಡುತ್ತಿವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ, ಶೋಭಾ‌ ಕರಂದ್ಲಾಜೆ, ಯತ್ನಾಳ್ ಅವರ ಮೇಲೆ ಕೇಸ್ ಹಾಕಿದ್ದಾರೆ. ತನಿಖೆ ಮಾಡಿ ಅಂತ ಹೇಳುವ ಹಕ್ಕು ವಿರೋಧ ಪಕ್ಷದ ನಾಯಕನಿಗೆ ಇಲ್ವಾ? ಸುಮೋಟೋ ಕೇಸ್ ದಾಖಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾನ್ಸ್‌ಟೇಬಲ್ ಕಂಪ್ಲೆಂಟ್ ಕೊಡ್ತಾನೆ, ಇನ್ಸ್‌ಪೆಕ್ಟರ್ ಕೇಸ್ ಹಾಕ್ತಾನೆ. ಸ್ಟೇಷನ್‌ಗಳು ಸ್ಟೇಷನ್‌ಗಳಾಗಿ ಉಳಿದಿಲ್ಲ. ಪೊಲೀಸರು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಸರ್ಕಾರ ಬಂದರೆ ಕೋಮುವಾದಿ ಮುಸ್ಲಿಂರಿಗೆ ಹಬ್ಬ ಇದ್ದಂಗೆ. ನಮ್ಮದು ಸರ್ಕಾರ ಇದೆ ಅಂತಾರೆ. ಯಾವುದೇ ರೋಡ್‌ನಲ್ಲಿ ಗಣೇಶನ ಮೆರವಣಿಗೆ ಮಾಡುವ ಹಾಗಿಲ್ಲ. ಇಡೀ ರಾಜ್ಯದಲ್ಲಿ ಗಣೇಶ ಹಬ್ಬ ತುರ್ತು ಪರಿಸ್ಥಿತಿ ಇದ್ದಂಗೆ ಆಗಿದೆ. ಗಣೇಶನನ್ನು ಎಲ್ಲಿ, ಎಷ್ಟು ದಿನ ಕೂರಿಸಬೇಕೆಂದು ಆಯಾ ಸಮಿತಿಯವರು ತೀರ್ಮಾನ ಮಾಡುತ್ತಿದ್ದರು. ಈಗ ಪೊಲೀಸರು ತೀರ್ಮಾನ ಮಾಡ್ತಾರೆ ಎಂದು ಕಿಡಿಕಾರಿದರು.