ಹಾಸನ:ಸಿದ್ದರಾಮಯ್ಯ ಮಾತನಾಡುವಾಗ ಡೆತ್‌ನೋಟ್ ಓದಿದರೂ ಅದರಲ್ಲಿ ಸಚಿವರು, ಎಂಎಲ್‌ಎ, ವಾಲ್ಮೀಕಿ ನಿಗಮದ ಅಧ್ಯಕ್ಷರ ಹೆಸರನ್ನು ಬಿಟ್ಟು ಓದುತ್ತಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗೇಲಿ ಮಾಡಿದರು.
ಸಕಲೇಶಪುರ ತಾಲ್ಲೂಕಿನ, ಕೊಲ್ಲಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗದ ನಾಯಕ ಎಂಬ ಕಾರಣಕ್ಕೆ ವಿಧಾನಸಭೆಯಲ್ಲಿ ಮಾತನಾಡಲು ಬಿಡುತ್ತಿಲ್ಲ ಎಂಬ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.
ಜನರಿಗೆ ತಪ್ಪು ಮಾಹಿತಿ ಹೋಗಬಾರದು. ಸಿಎಂ ಅವರು ಹಗರಣದಲ್ಲಿ ಯಾರೂ ಭಾಗಿಯಾಗಿಲ್ಲ. ಅಧಿಕಾರಿಗಳೇ ಎಲ್ಲಾ ತಿಂದು ಹಾಕಿದ್ದಾರೆ ಅಂತ ಹೇಳಿದ್ದಾರೆ. 187 ಕೋಟಿ ರೂ. ಅಧಿಕಾರಿಗಳೇ ತಿನ್ನಲು ಆಗುತ್ತಾ? ಅದರ ಹಿಂದೆ ದೊಡ್ಡ ತಿಮಿಂಗಿಲಗಳೇ ಇರುವುದರಿಂದ ತಿಂದಿದ್ದಾರೆ. ಅಧಿಕಾರಿಗಳು ಅಲ್ಲಿ, ಇಲ್ಲಿ ಬಿದ್ದಿದ್ದನ್ನು ತಿಂದಿದ್ದಾರೆ ಅಷ್ಟೇ ಎಂದರು.
ಈ ಸರ್ಕಾರ ಪಾಪರ್ ಆಗಿದೆ, ಅವರ ಬಳಿ ದುಡ್ಡಿಲ್ಲ. ಅಂದಾಜು ವೆಚ್ಚ ತಯಾರಿಸದೇ ಗ್ಯಾರೆಂಟಿ ಯೋಜನೆ ತಂದಿದ್ದಾರೆ. ಅದಕ್ಕೇ ಈಗ ದಲಿತರ ಹಣ ಹುಡುಕುತ್ತಿದ್ದಾರೆ. ಒಕ್ಕಲಿಗರ ನಿಗಮ, ಬ್ರಾಹ್ಮಣರು, ಲಿಂಗಾಯತರ ನಿಗಮದ ಹಣ ಇದೆ. ಎಲ್ಲವನ್ನೂ ಬಳಸಿಕೊಳ್ಳಿ. ಇಲ್ಲವಾದರೆ ನಿಮ್ಮ ಬಾಳು ಬೀದಿಗೆ ಬರುತ್ತದೆ ಎಂದು ನಾನೇ ಹೇಳಿದ್ದೇನೆ.
ಈ ಸರ್ಕಾರ ಒಂದು ರೀತಿ ಕೋಮಾ ಸ್ಟೇಜ್‌ನಲ್ಲಿದೆ. ನಿಮಗೆ ಯಾವ್ಯಾವ ಜಾತಿ ಬೇಕು, ಸಂವಿಧಾನ ಬದಲಾವಣೆ ಮಾಡಿ ಬಿಡೋಣ. ಇಂತಹ ಜಾತಿಯವರು ಲೂಟಿ ಹೊಡೆದರೆ, ಅಕ್ರಮ ಮಾಡಿದರೆ, ಕಳ್ಳತನ ಮಾಡಿದರೆ ಯಾವುದೇ ಕ್ರಮ ತೆಗೆದುಕೊಳ್ಳುವ ಆಗಿಲ್ಲ ಎಂದು ಕಾನೂನು ಮಾಡಿಬಿಡಿ ಎಂದು ಕಟಕಿಯಾಡಿದರು.
ಈ ಜಾತಿಯವನಾದರೆ ಕಳ್ಳತನ ಮಾಡಬಹುದು, ಈ ಜಾತಿಯವನಾದರೆ ಕಳ್ಳತನ ಮಾಡಬಾರದು ಎಂದು ಸಂವಿಧಾನದಲ್ಲಿ ಇದೆಯಾ? ಈ ಸರ್ಕಾರ ಹಗರಣಗಳಲ್ಲಿ ಸಿಲುಕಿಕೊಂಡಿದೆ. ಹೊರಗಡೆ ಬರಲು ಆಗುತ್ತಿಲ್ಲ. ದಾರಿ ಕಾಣದಾಗಿದೆ. ಎಲ್ಲಾ ದಲಿತರ ಹಣ ಉಪಯೋಗಿಸಿಕೊಳ್ಳುತ್ತಿದ್ದಾರೆ. ವಾಲ್ಮೀಕಿ ಹಗರಣ, ಮುಡಾದಲ್ಲೂ ದಲಿತರ ಹಣವೇ ಲೂಟಿಯಾಗಿದೆ.
ದಲಿತರ ತಲೆ ಮೇಲೆ ಚಪ್ಪಡಿ ಎಳೆಯುವ ಕೆಲಸವನ್ನು ಈ ಸರ್ಕಾರ ಮಾಡಿದೆ. ರಾಜ್ಯ ಸರ್ಕಾರಕ್ಕೆ ಮರ್ಯಾದೆ ಇಲ್ಲ, ತಪ್ಪಿಸಿಕೊಳ್ಳುವ ದಾರಿ ಇಲ್ಲ. ಬಿಜೆಪಿ ಅವಧಿಯವರು 21 ಆರೋಪಪಟ್ಟಿ ಮಾಡಿದ್ದಾರೆ ನಾನು 78 ಬಿಡುಗಡೆ ಮಾಡಿದ್ದೇನೆ ಎಂದರು.