ರೈಲ್ವೆ ಹಳಿಗೆ ಉರುಳಿ ಬಿದ್ದ ಬೃಹತ್ ಮರ: ರೈಲು ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

ಹೊಳೆನರಸೀಪುರ, ಮಾ. 8 – ಹೊಳೆನರಸೀಪುರ ಪಟ್ಟಣದ ರೈಲು ನಿಲ್ದಾಣದ ಸಮೀಪ ಬೃಹತ್ ಗಾತ್ರದ ಒಣ ಮರವೊಂದು ರೈಲ್ವೆ ಹಳಿಗೆ ಅಡ್ಡಲಾಗಿ ಉರುಳಿ ಬಿದ್ದ ಘಟನೆ ಕಳೆದ ರಾತ್ರಿ ಸಂಭವಿಸಿದ್ದು, ರೈಲು ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.

ಹಳಿಗೆ ಅಡ್ಡಲಾಗಿ ಬಿದ್ದಿದ್ದ ಮರ

ಶಿವಮೊಗ್ಗದಿಂದ ಮೈಸೂರು ಕಡೆಗೆ ತೆರಳುತ್ತಿದ್ದ ತಾಳಗುಪ್ಪ-ಮೈಸೂರು ಎಕ್ಸ್ಪ್ರೆಸ್  ರೈಲು, ಹೊಳೆನರಸೀಪುರ ಪಟ್ಟಣದ ಹತ್ತಿರ ಹಳೇ ರೈಲು ನಿಲ್ದಾಣವನ್ನು ಸಮೀಪಿಸುತ್ತಿದ್ದ ವೇಳೆ, ಹಳಿಗೆ ಅಡ್ಡಲಾಗಿ ಉರುಳಿದ ಮರವನ್ನು ಕಂಡ ಚಾಲಕ ತಕ್ಷಣವೇ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದಾರೆ.

ರಾತ್ರಿ ವೇಳೆಯಾಗಿದ್ದರಿಂದ ದಟ್ಟ ಕತ್ತಲಿನ ನಡುವೆಯೂ ಚಾಲಕನ ಚಾಕಚಕ್ಯತೆಯಿಂದ, ಹೆಚ್ಚಿನ ಅನಾಹುತ ಸಂಭವಿಸುವುದು ತಪ್ಪಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ರೈಲ್ವೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮರವನ್ನು ತೆರವುಗೊಳಿಸಿ ಹಳಿಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.

ಈ ಘಟನೆಯಿಂದಾಗಿ ರೈಲು ಸಂಚಾರದಲ್ಲಿ ಕೆಲಕಾಲ ವ್ಯತ್ಯಯ ಉಂಟಾದರೂ, ಅಧಿಕಾರಿಗಳ ತ್ವರಿತ ಕಾರ್ಯಾಚರಣೆಯಿಂದ ಸಮಸ್ಯೆಯನ್ನು ಶೀಘ್ರ ಪರಿಹರಿಸಲಾಯಿತು. ಹೊಳೆನರಸೀಪುರ ಹಳೇ ರೈಲು ನಿಲ್ದಾಣದ ಬಳಿ ಇನ್ನೂ ಹಲವಾರು ಒಣಗಿರುವ ಮರಗಳಿದ್ದು, ಅವುಗಳನ್ನು ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.