ಹಾಸನ: ನಗರದಲ್ಲಿ ಡಿ. 5ರಂದು ಆಯೋಜನೆಯಾಗಿರುವ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶವನ್ನು ಪಕ್ಷದ ಕಾರ್ಯಕ್ರಮವಾಗಿ ಬದಲಾಯಿಸುವಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಶಸ್ವಿಯಾಗಿದ್ದು, ಆ ಮೂಲಕ ಸಿಎಂ ಆಪ್ತರಿಗೆ ಕಡಿವಾಣ ಹಾಕಿದ್ದಾರೆ.
ಆರಂಭದಲ್ಲಿ ಈ ಸಮಾವೇಶ ಪಕ್ಷ ಅಥವಾ ಸರ್ಕಾರದ ಚಟುವಟಿಕೆಯಿಂದ ಪ್ರತ್ಯೇಕವಾಗಿ ನಡೆಯಬೇಕೆಂದು ಸಿದ್ದರಾಮಯ್ಯನವರ ಆಪ್ತರು ಹೇಳಿದ್ದರು. ಆದರೆ, ಈ ವಿಚಾರ ತಿಳಿಯುತ್ತಿದ್ದಂತೆಯೇ ಡಿ.ಕೆ. ಶಿವಕುಮಾರ್ ಅದನ್ನು ತಡೆದು, ಸಮಾವೇಶವನ್ನು ಪಕ್ಷದ ಅಡಿಯಲ್ಲೆ ನಡೆಸುವಂತೆ ಕಾರ್ಯಕ್ರಮ ರೂಪಾಂತರಿಸಿದರು.
ಡಿಕೆಶಿ ಹಾಸನ ಭೇಟಿ:
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಮಧ್ಯಾಹ್ನ 3 ಗಂಟೆಗೆ ಹಾಸನಕ್ಕೆ ಭೇಟಿ ನೀಡಿ ಸಮಾವೇಶದ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಸ್ಥಳದ ಸಿದ್ಧತೆಗಳನ್ನು ವೀಕ್ಷಿಸುವುದಕ್ಕೂ, ಕಾರ್ಯಕ್ರಮದ ಆಯೋಜನೆ ಕುರಿತು ವಿವರಗಳನ್ನು ತಿಳಿದುಕೊಳ್ಳಲೂ ಅವರು ಆಗಮಿಸಲಿದ್ದಾರೆ.
ಪ್ರಮುಖರ ಸಭೆ:
ಸ್ಥಳ ಪರಿಶೀಲನೆ ನಂತರ, ಡಿಕೆಶಿ ಹಾಸನದ ಶಾಸಕರು, ಕಾಂಗ್ರೆಸ್ ಮುಖಂಡರು, ಮಾಜಿ ಶಾಸಕರು, ಎಂಎಲ್‌ಸಿ ಹಾಗೂ ಪ್ರಮುಖ ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಸಮಾವೇಶದ ಸಿದ್ಧತೆ, ಸಂಘಟನಾ ಕಾರ್ಯಗಳು ಹಾಗೂ ಮುಂದಿನ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಯಲಿದೆ.
ಈ ಮೂಲಕ, ಡಿ.ಕೆ. ಶಿವಕುಮಾರ್ ಪಕ್ಷದಿಂದಲೇ ಸಮಾವೇಶವನ್ನು ನಡೆಸಲು ಯಶಸ್ವಿಯಾಗಿದ್ದು, ಸಿಎಂ ಸಿದ್ದರಾಮಯ್ಯ ಅವರನ್ನು ಉತ್ಸವಮೂರ್ತಿಯಾಗಿ ಮಾಡುವ ಅವರ ಆಪ್ತರ ಯತ್ನಕ್ಕೆ ಬ್ರೇಕ್ ಬಿದ್ದಿದೆ