ಅಸ್ಪೃಶ್ಯತೆ ಇಲ್ಲದ ಒಂದಾದರೂ ಗ್ರಾಮವನ್ನು ನೋಡುವ ಕನಸು ಹೊತ್ತ ಕವಿ ಸುಬ್ಬು ಹೊಲೆಯಾರ್ ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಕನ್ನಡ ರಾಜ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ

ಹಾಸನ: ಜಿಲ್ಲೆಯ ಕವಿ ಸುಬ್ಬು ಹೊಲೆಯಾರ್ ಅವರಿಗೆ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ದೊರಕಿದ್ದು, ಬೆಂಗಳೂರಿನಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಿಎಂ ಪ್ರಶಸ್ತಿ ಪ್ರದಾನ ಮಾಡುವರು.

“ಕನಿಷ್ಟ ಒಂದು ಹಳ್ಳಿಯಲ್ಲಾದರೂ ಅಸ್ಪೃಶ್ಯತೆ ಇಲ್ಲದ ಗ್ರಾಮವನ್ನು ನೋಡುವುದು ನನ್ನ ಕನಸು’’

ಸುಬ್ಬು ಹೊಲೆಯಾರ್ ಪರಿಚಯ:

ಸುಬ್ಬುಹೊಲೆಯಾರ್ ಎಂದೇ ನಾಡಿನಾದ್ಯಂತ ಪ್ರಖ್ಯಾತರಾಗಿರುವ ಹೆಚ್.ಕೆ.ಸುಬ್ಬಯ್ಯ ಇವರು ಕೋಮಾರಯ್ಯ ಮತ್ತು ತಿಪ್ಪಮ್ಮ ದಂಪತಿಗಳ ಮಗನಾಗಿ ೨೧-೦೯-೧೯೬೨ ರಂದು ಸಕಲೇಶಪುರ ತಾಲ್ಲೂಕು ಹೆತ್ತೂರಿನಲ್ಲಿ ಜನಿಸಿದರು, ಡಿಪ್ಲೊಮ ಇನ್ ಡ್ರಾಮಾ ಪದವಿ,ನಿನಾಸಂ ಹೆಗ್ಗೋಡು ಇಲ್ಲಿ ರಂಗ ಶಿಕ್ಷಣ ಕಲಿತರು, ಸುಮಾರು ಒಂದೂವರೆ ದಶಕಗಳ ಕಾಲ ದಲಿತ ಸಂಘರ್ಷ ಸಮೀತಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದವರು, ಮೂಲತಃ ದಲಿತರ ನೋವು ನಲಿವುಗಳಿಗೆ ಸ್ಪಂದಿಸುತ್ತಾ, ಈ ನೆಲದ ನೊಂದವರ ದ್ವನಿ ಪಿ.ಲಂಕೇಶ್ ಅವರ ಗರಡಿಯಲ್ಲಿ ಪಳಗಿದ ಇವರು ಬಿ.ಕೃಷ್ಣಪ್ಪ, ದೇವನೂರು ಮಹಾದೇವ, ಸಿದ್ದಲಿಂಗಯ್ಯ, ನಿರಂಜನ, ಕುವೆಂಪು, ಬುದ್ದ,ಬಸವ,ಅಂಬೇಡ್ಕರ್. ಅವರ ಪ್ರಭಾವಗಳು ಇವರ ಬೌದ್ಧಿಕ ಆಲೋಚನೆಗಳನ್ನು ಮತ್ತಷ್ಟು ಶ್ರೀಮಂತಗೊಳಿಸಿವೆ. ಸೂಜಿಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡು ಎಂಬ ಕವನ ಸಂಕಲನವನ್ನು – ೨೦೦೩ ಪ್ರಕಟಿಸುವುದರ ಮೂಲಕ ನೊಂದವರ ಒಡಲ ದ್ವನಿಯಾಗಿ ನಾಡಿನಾದ್ಯಂತ ಮೊಳಗಿದರು, ಸೂಜಿಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡು ಕೃತಿಗೆ ಡಾ. ಜಿ.ಎಸ್.ಎಸ್. ಕಾವ್ಯ ಪ್ರಶಸ್ತಿ, ದಿನಕರದೇಸಾಯಿ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶ್ರೀಗಂಧದ ಹಾರ ಕಾವ್ಯ ಪ್ರಶಸ್ತಿ, ಅಮ್ಮ’ ಗೌರವ ಪ್ರಶಸ್ತಿ, ಮುಳ್ಳೂರ್ ನಾಗರಾಜ್ ಕಾವ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಸಂದಿವೆ. ಇವರ ಎರಡನೇ ಕಾವ್ಯ ಸಂಗ್ರಹ ಎಲ್ಲರ ಬೆರಳಲ್ಲೂ ಅಂಟಿಕೊಂಡ ದು:ಖವೇ -೨೦೧೩ ರಲ್ಲಿ ಪ್ರಕಟವಾಗಿದೆ. ಈ ಕಾವ್ಯಕ್ಕೆ ೨೦೧೩ ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಪು.ತಿ.ನ ಕಾವ್ಯ ಪ್ರಶಸ್ತಿ ದೊರೆತಿದೆ ಈ ಕಾವ್ಯದ ಹಸ್ತಪ್ರತಿಗೆ ೨೦೧೦ ನೇ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ ಸಂದಿದೆ, ೨೦೧೩ ನೇ ಸಾಲಿನ ಬುದ್ಧ ಪ್ರಶಸ್ತಿ, ದಲಿತಸಿರಿ ಪ್ರಶಸ್ತಿ, ಸೇರಿದಂತೆ ಹಲವಾರು ಪುರಸ್ಕಾರಗಳು ಅರಸಿ ಬಂದಿವೆ. ಇವರ ಕಾವ್ಯ ಕೃಷಿಗೆ ತನ್ನ ತವರು ಜಿಲ್ಲೆಯ ಜನತೆ ಇವರ ಅಧ್ಯಕ್ಷತೆಯಲ್ಲಿ ೨೦೧೦ ರಲ್ಲಿ ಸಕಲೇಶಪುರ ತಾಲ್ಲೂಕ್ಕು

ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ನೀಡಿ ಗೌರವಿಸಿದೆ ನಾಡಿನ ಪ್ರಖ್ಯಾತ ನಿರ್ದೇಶಕಿ ಕವಿತಾಲಂಕೇಶ್ ಅವರು ಸುಬ್ಬುಹೊಲೆಯಾರ್ ಅವರ ಜೀವನ ಕಥೆ ‘ದನ ಕಾಯದವನು’ ಆಧಾರಿತ ‘ ಕರಿಯ ಕಣ್‌ಬಿಟ್ಟ’ ಕಲಾತ್ಮಕ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ ನಾಡಿನಾದ್ಯಂತ ಚಿತ್ರ ಪ್ರದರ್ಶನ ಕಂಡಿದೆ, ೨೦೦೭ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಕಾವ್ಯಸಂಗ್ರಹ ಇವರ ಸಂಪಾದಕತ್ವದಲ್ಲಿ ಹೊರಬಂದಿದೆ, ದೂರದರ್ಶನ ನೌಕರರು ಅಭಿನಯಿಸಿದ್ದ ಹೆಚ್.ಎಸ್.ವೆಂಕಟೇಶ್ ಮೂರ್ತಿರವರ ‘ಹೆಜ್ಜೆಗಳು ನಾಟಕವನ್ನು ನಿರ್ದೇಶಿಸಿದ್ದಾರೆ ಈ ಕಾರ್ಯತತ್ಪರತೆಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ, ಇನ್ನು ಶಿವಮೊಗ್ಗದಲ್ಲಿ ನಡೆದ ರಾಜ್ಯ ಬಂಡಾಯ ಸಾಹಿತ್ಯ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದರು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೂಡಬಿದರೆ, ಗದಗ, ಗಂಗಾವತಿ ಕವಿಸಮ್ಮೇಳನಗಳಲ್ಲಿ,ಬೆಳಗಾವಿಯಲ್ಲಿನಡೆದ ವಿಶ್ವಕನ್ನಡ ಸಾಹಿತ್ಯಸಮ್ಮೇಳನದ ಕವಿಗೋಷ್ಟಿಯಲ್ಲಿ ಭಾಗವಹಿಸಿ , ಶ್ರವಣಬೆಳಗೊಳ (ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ) ಗೋವಾ, ಕೊಯಂಬತ್ತೂರ್ ರಾಷ್ಟ್ರೀಯ ಕವಿಗೋಷ್ಟಿಯಲ್ಲಿ ಭಾಗವಹಿಸಿ ಕಾವ್ಯ ವಾಚನ ಮಾಡಿದ್ದಾರೆ. ಇವರ ಪದ್ಯಗಳನ್ನು ಮಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಧಾರವಾಡ ವಿಶ್ವವಿದ್ಯಾಲಯ ಮತ್ತು ಕುವೆಂಪು ವಿಶ್ವವಿದ್ಯಾಲಯಗಳು ತಮ್ಮ ಶೈಕ್ಷಣಿಕ ಪಠ್ಯಕ್ರಮದಲ್ಲಿ ಪದ್ಯಗಳನ್ನು ಪ್ರಕಟಮಾಡಿವೆ ಈ ಕಾರ್ಯ ಇವರ ಕಾವ್ಯಶಕ್ತಿಯನ್ನು ವ್ಯಕ್ತಪಡಿಸುತ್ತದೆ. ಹೀಗೆ ಸಾಹಿತ್ಯ, ರಂಗಭೂಮಿ, ಸಂಘಟನೆ, ಸೇರಿದಂತೆ ಮಾನವೀಯ ಮೌಲ್ಯಗಳ ನಿರಂತರ ಪ್ರತಿಪಾದನೆಯಲ್ಲಿ ತೊಡಗಿರುವ ಜೀವಪರ ದ್ವನಿಗಳ ಪರವಾಗಿ ಇಂದಿಗೂ ದುಡಿಯುತ್ತಿದ್ದಾರೆ, ದೂರದರ್ಶನ ಚಂದನ ವಾಹಿನಿಯಲ್ಲಿ ೨೬ವರ್ಷಗಳ ಕಾಲ ಸೇವೆ ಸಲ್ಲಿಸಿ ಪ್ರಸ್ತುತ ಆಕಾಶವಾಣಿ ಬೆಂಗಳೂರು ಇಲ್ಲಿ ಕಾರ್ಯಕ್ರಮ ನಿರ್ಮಾಪಕರಾಗಿ ಸೇವೆ ಸಲ್ಲಿಸಿ ಆರು ತಿಂಗಳ ಹಿಂದೆ ನಿವೃತ್ತರಾಗಿದ್ದಾರೆ.. ಈ ನಾಡಿನ ಸುಮಾರು ೩೦ ಸಾವಿರ ಹಳ್ಳಿಗಳಲ್ಲಿ ಕನಿಷ್ಟ ಒಂದು ಹಳ್ಳಿಯಲ್ಲಾದರೂ ಅಸ್ಪೃಶ್ಯತೆ ಇಲ್ಲದ ಗ್ರಾಮವನ್ನು ನೋಡುವುದು ಇವರ ಕನಸು.

ಮಾಹಿತಿಗಾಗಿ ಅವರ ಸಂಪರ್ಕ ಸಂಖ್ಯೆ -9483974089