ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಉತ್ತರ ನೀಡಲು‌‌ ಕಾಂಗ್ರೆಸ್ ನಿಂದಲೇ ಸ್ವಾಭಿಮಾನಿ ಸಮಾವೇಶ; ಕೆ‌.ಎನ್.ರಾಜಣ್ಣ

ಸಮಾರಂಭಕ್ಕೆ ಹಿಂದುಳಿದ ವರ್ಗದವರ ಸಂಯುಕ್ತಾಶ್ರಯ ಇದೆ. ಕಾಂಗ್ರೆಸ್‌‍ ಪಕ್ಷ ಪ್ರಥಮ, ಆ ನಂತರ ಹಿಂದುಳಿದ ವರ್ಗ, ತಳ ಸಮುದಾಯಗಳ ಸ್ವಾಭಿಮಾನಿ ವೇದಿಕೆ ಹೆಸರಿನಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ.

ಹಾಸನ : ವಿರೋಧ ಪಕ್ಷದವರ ಅಪಪ್ರಚಾರಕ್ಕೆ ಉತ್ತರ ನೀಡಲು ಹಾಸನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದು ಯಾರ ವಿರುದ್ಧವೂ ಅಲ್ಲ, ಯಾರನ್ನೋ ಅವಮಾನ ಮಾಡುವ ಉದ್ದೇಶವನ್ನೂ ಹೊಂದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌.ರಾಜಣ್ಣ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚ ಗ್ಯಾರಂಟಿ, ವಿವಿಧ ಅಭಿವೃದ್ಧಿ ಕಾಮಗಾರಿಯ ಯಶಸ್ಸಿನ ಕುರಿತು ರಾಜ್ಯದ ಜನರಿಗೆ ಮಾಹಿತಿ ನೀಡುವುದಷ್ಟೇ ಉದ್ದೇಶ. ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಹಾಸನದಲ್ಲಿ ಸಮಾವೇಶ ಹಮಿಕೊಳ್ಳಲಾಗುತ್ತಿದೆ ಹೊರತು ಯಾರದೋ ಮೇಲಿನ ದ್ವೇಷದಿಂದ ಅಲ್ಲವೆಂದು ಸ್ಪಷ್ಟಪಡಿಸಿದರು.

ಸಮಾರಂಭಕ್ಕೆ ಹಿಂದುಳಿದ ವರ್ಗದವರ ಸಂಯುಕ್ತಾಶ್ರಯ ಇದೆ. ಕಾಂಗ್ರೆಸ್‌‍ ಪಕ್ಷ ಪ್ರಥಮ, ಆ ನಂತರ ಹಿಂದುಳಿದ ವರ್ಗ, ತಳ ಸಮುದಾಯಗಳ ಸ್ವಾಭಿಮಾನಿ ವೇದಿಕೆ ಹೆಸರಿನಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಆದರೆ ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಉತ್ತರ ಕೊಡುವ ವೇದಿಕೆ ಇದಾಗಲಿದೆ.

ಯಾರನ್ನೂ ಕಡೆಗಣಿಸುವುದು ಅಥವಾ ಅಪಮಾನ ಮಾಡುವ ಕಾರ್ಯಕ್ರಮ ಅಲ್ಲ. ಇದು ಶಕ್ತಿ ಪ್ರದರ್ಶನವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ವಿರೋಧ ಪಕ್ಷಗಳಿಗೆ ಉತ್ತರ ಕೊಡುವ ಕಾರ್ಯಕ್ರಮ. ಪಕ್ಷದ ಅಧ್ಯಕ್ಷರು ಹಾಗು ಎಲ್ಲಾ ಸಚಿವರು ಭಾಗವಹಿಸುತ್ತಾರೆ ಎಂದು ಹೇಳಿದರು.

ಸಮಾವೇಶ ಕುರಿತು ಎಐಸಿಸಿಗೆ ತಲುಪಿದ ಅನಾಮಧೇಯ ಪತ್ರದ ಕುರಿತು ಪ್ರತಿಕ್ರಿಯಿಸಿದ ಅವರು, ಅನಾಮಧೇಯ ಪತ್ರ ಯಾವುದೇ ತನಿಖೆಗೆ ಅರ್ಹವಲ್ಲ. ಆದರೆ ರಾಜಕೀಯವಾಗಿ ಬರುವ ಪತ್ರಗಳಲ್ಲಿ ನಂಬುವಂತಹ ಮಾಹಿತಿ ಇದ್ದರೆ ತಿರಸ್ಕರಿಸಲು ಆಗುವುದಿಲ್ಲ. ಅದೇ ರೀತಿ ಅದಕ್ಕೆ ವಿರುದ್ಧವಾಗಿ ಇನ್ನೊಂದು ಪತ್ರ ಬಂದರೆ ಏನು ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರ ವಿರುದ್ಧ ನಿರಂತರವಾಗಿ ಇರುತ್ತದೆ ಎಂದರು.

ಎಐಸಿಸಿ ಅವರ ಗಮನಕ್ಕೆ ತರದೆ ಯಾವ ಕಾರ್ಯಕ್ರಮ ಮಾಡುವುದಿಲ್ಲ. ಈ ಕಾರ್ಯಕ್ರಮಕ್ಕೆ ವರಿಷ್ಟರ ಒಪ್ಪಿಗೆ ಇದೆ. ಈ ಬಗ್ಗೆ ನಾಯಕರಿಂದ ನಕಾರಾತ್ಮಕ ಸೂಚನೆಗಳಿಲ್ಲ. ಸಿದ್ದರಾಮಯ್ಯ ಅವರನ್ನು ಒಳಗೊಂಡಂತೆ ಎಲ್ಲರಿಗೂ ಶಕ್ತಿ ತುಂಬುವ ಕಾರ್ಯಕ್ರಮ ಇದಾಗುತ್ತದೆ ಎಂದು ತಿಳಿಸಿದರು.

ಸಚಿವು ಸಂಪುಟ ಪುನರ್‌ ರಚನೆ ವಿಚಾರವಾಗಿ ಹೈಕಮಾಂಡ್‌ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.