ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮಣಿಸಲು ಕೆ.ಎಂ.ಶಿವಲಿಂಗೇಗೌಡರು ಕಾಂಗ್ರೆಸ್ ಅಭ್ಯರ್ಥಿಯಾಗಲಿ: ಬಿ.ಶಿವರಾಮು

ಜೆಡಿಎಸ್ ಬಿಟ್ಟು ಬಂದು ಗೆದ್ದಿರುವ ಶಿವಲಿಂಗೇಗೌಡ ಪರ ಜನರ ಅಭಿಪ್ರಾಯ ಇದೆ; ಅವರಷ್ಟು ಸಂಪನ್ಮೂಲ ಯಾರಲ್ಲೂ ಇಲ್ಲ

ಹಾಸನ: ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಇಲ್ಲವೇ ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿರುವ ಹಾಸನ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಹೆಸರನ್ನು ಪಕ್ಷದ ಬಹಿರಂಗ ಸಭೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸೂಚಿಸುವ ಮೂಲಕ ಮಾಜಿ ಸಚಿವ ಬಿ.ಶಿವರಾಮು ಹೊಸ ಬಾಂಬ್ ಸಿಡಿಸಿದರು.

ಹಾಸನ ಜಿಲ್ಲೆಯಲ್ಲಿ ಬಹಳಷ್ಟು ಜನ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ಅವರು ಎಲ್ಲೋ ಒಂದು ಕಡೆ ಮೂಲೆ ಗುಂಪಾಗಿದ್ದಾರೆ. ಅಧಿಕಾರ ಬಂದಾಗಲೆಲ್ಲಾ ಮೂಲೆ ಗುಂಪು ಮಾಡ್ತಾರೆ ಎಂದು ಬಿ.ಶಿವರಾಮು ಬೇಸರ ವ್ಯಕ್ತಪಡಿಸಿದರು.

ಅಧಿಕಾರ ಇಲ್ಲದಿದ್ದಾಗ ಮಾತ್ರ ನಮ್ಮನ್ನು ಬಳಸಿಕೊಳ್ತಾರೆ, ಅಧಿಕಾರ ಬಂದಾಗ ನಮ್ಮನ್ನು ಬಿಡ್ತಾರೆ. ನಲವತ್ತು ವರ್ಷ ರಾಜಕೀಯದಲ್ಲಿ ನಿಷ್ಠೆಯಿಂದ, ನಿಯತ್ತಾಗಿ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ.

ನನಗೂ ಅಧಿಕಾರ ವಂಚನೆ ಆಗುತ್ತಿದೆ, ಮೂಲೆ ಗುಂಪಾಗುತ್ತಿದ್ದೇವೆ ಅನ್ನಿಸುತ್ತಿದೆ. ಏನೇ ಇದ್ದರೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲೇಬೇಕು ಎಂದರು.

ಯಾರು ಸಮರ್ಥ ಅಭ್ಯರ್ಥಿ ಎನ್ನುವ ಪ್ರಶ್ನೆ ನಮ್ಮಲ್ಲಿದೆ. ಜನಾಭಿಪ್ರಾಯ ಸಂಗ್ರಹ ಮಾಡಿದ್ದೇವೆ. ಇಡೀ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಸಮರ್ಥರು ಅನ್ನುವ ಅಭಿಪ್ರಾಯ ಬರುತ್ತಿದೆ. ನಾನು ಪ್ರಾಮಾಣಿಕವಾಗಿ ಕಾಂಗ್ರೆಸ್ ಗೆಲ್ಲಲೇಬೇಕು ಎಂದುಕೊಂಡಿದ್ದೇವೆ. ಆದ್ದರಿಂದ ಶಾಸಕ ಕೆ.ಎಂ.ಶಿವಲಿಂಗೇಗೌಡರನ್ನು ಎಲ್ಲರ ಪರವಾಗಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸೂಚಿಸುತ್ತಿದ್ದೇನೆ ಎಂದರು.

ಈ ವಿಷಯದಲ್ಲಿ ಅವರನ್ನು ಕೇಳಿಲ್ಲ, ಇದು ಜನಾಭಿಪ್ರಾಯವಾಗಿದೆ. ಇದನ್ನು ಹೈಕಮಾಂಡ್ ಗಮನಕ್ಕೂ ತರುತ್ತೇನೆ. ಹೈಕಮಾಂಡ್ ಕೂಡ ಇದನ್ನೇ ಮಾಡುತ್ತಿದೆ. ಯಾವ ಜಿಲ್ಲೆಯಲ್ಲಿ ಸಮರ್ಥವಾದ ಅಭ್ಯರ್ಥಿ ಇಲ್ಲವೋ ಅಲ್ಲಿ ಮಂತ್ರಿಗಳನ್ನೇ ಕಣಕ್ಕಿಳಿಸಲು ಕೈ ಹಾಕಿದ್ದಾರೆ ಎಂದರು.

ನಮಗೆ ಕಾಂಗ್ರೆಸ್ ಗೆಲ್ಲಬೇಕು. ಆದ್ದರಿಂದ ಜನಾಭಿಪ್ರಾಯವನ್ನು ಹೈಕಮಾಂಡ್ ಗಮನಕ್ಕೆ ತರುತ್ತೇನೆ. ನಾವು ಸೂಚಿಸಿರುವ ವ್ಯಕ್ತಿ ಎಲ್ಲಾ‌ ವಿಚಾರದಲ್ಲೂ ಸಮರ್ಥರು ಎಂದರು.

ಶಿವಲಿಂಗೇಗೌಡರು ಜೆಡಿಎಸ್ ಬಿಟ್ಟು ಬಂದು ಗೆದ್ದಿದ್ದಾರೆ. ನಾವು ನೋಡಿದಂತೆ ಜೆಡಿಎಸ್ ಬಿಟ್ಟು ಬಂದು ಯಾರೂ ಗೆದ್ದಿಲ್ಲ. ಈ‌ ಜಿಲ್ಲೆಯಲ್ಲಿ ಜೆಡಿಎಸ್ ಮಣಿಸಲೇಬೇಕೆಂದರೆ ಅವರಿಗಿಂತ ಸಮರ್ಥ ಅಭ್ಯರ್ಥಿ ಇಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು.

ಬದ್ದವೈರಿಗಳಂತೆ ಜೆಡಿಎಸ್ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಶಿವಲಿಂಗೇಗೌಡರನ್ನು ಕಣಕ್ಕಿಳಿಸಿ ಪಣತೊಟ್ಟು ಹೋರಾಟ ಮಾಡೋಣ.
ಅವರಿವರನ್ನು ಆಯ್ಕೆ ಮಾಡುವ ಬದಲು, ಜೆಡಿಎಸ್ ವಿರುದ್ಧ ಗೆಲ್ಲಲು ಶಿವಲಿಂಗೇಗೌಡರನ್ನು ಅಭ್ಯರ್ಥಿ ಮಾಡಲೇಬೇಕು ಎಂದರು.

ಜೆಡಿಎಸ್-ಬಿಜೆಪಿ ಒಂದಾಗಿವೆ. ಆ ಕುಟುಂಬದ ವಿರುದ್ಧ ಯಾರಾದರೂ ಒಬ್ಬ ಸಮರ್ಥ ಅಭ್ಯರ್ಥಿ ಎಂದರೆ ಕೆ.ಎಂ.ಶಿವಲಿಂಗೇಗೌಡರು ಮಾತ್ರ. ಇದು ಜನಾಭಿಪ್ರಾಯ ಕೂಡ ಆಗಿದೆ ಎಂದರು.

ಇದಕ್ಕೂ ಒಂದು ಹೆಜ್ಜೆ ಮುಂದೆ ಹೋದರೆ ಸಂಪನ್ಮೂಲ ಅತ್ಯವಶ್ಯಕ. ಕೊರತೆ ಇಲ್ಲದೆ ಸಂಪನ್ಮೂಲ ಇರುವುದು ಶಿವಲಿಂಗೇಗೌಡರ ಹತ್ತಿರ ಮಾತ್ರ. ಮಂತ್ರಿ ಸ್ಥಾನದಲ್ಲಿರುವವರನ್ನೇ ಚುನಾವಣೆಗೆ ನಿಲ್ಲಿಸುತ್ತಿದ್ದಾರೆ. ಲೋಕಸಭಾ ಚುನಾವಣಾ ಬಹಳ ಮುಖ್ಯ ಎಂದರು.