ಕಾಫಿ ಬೆಳೆಗಾರರ ಒತ್ತುವರಿ ಭೂಮಿ ಗುತ್ತಿಗೆ ಯೋಜನೆ; ಜಿಲ್ಲೆಯಲ್ಲಿ ಸಾಧ್ಯವಾಗದ ಅರ್ಜಿ ಸಲ್ಲಿಕೆ; ಕವನ್ ಗೌಡ ಅಸಮಾಧಾನ

ಹಾಸನ: ಕಾಫಿ ಬೆಳೆದಿರುವ ಒತ್ತುವರಿ ಜಮೀನಿನ ಗುತ್ತಿಗೆಗೆ ಅರ್ಜಿ ಸಲ್ಲಿಸಲು ಹಾಸನ ಜಿಲ್ಲೆಯಲ್ಲಿಯೂ ಅವಕಾಶ ಮಾಡಿಕೊಡಬೇಕು ಎಂದು ವಕೀಲ ಹಾಗೂ ಸಕಲೇಶಪುರ ಎಪಿಎಂಸಿ ಮಾಜಿ ಅಧ್ಯಕ್ಷ ಕವನ್ ಗೌಡ ಒತ್ತಾಯಿಸಿದರು.

ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2೦೦5ಕ್ಕೂ ಮುಂಚೆ ಸರ್ಕಾರಿ ಭೂಮಿಗಳ ಅನಧಿಕೃತ ಅನುಭೋಗದಲ್ಲಿದ್ದು, ಕಾಫಿ ಮೊದಲಾದ ಬೆಳೆ ಬೆಳೆಯಲಾಗುತ್ತಿತ್ತು.
ಹೀಗೆ ಒತ್ತುವರಿ ಮಾಡಿಕೊಂಡಿರುವ ಕುಟುಂಬಗಳಿಗೆ 25 ಎಕರೆಗೆ ಹೆಚ್ಚು ವಿಸ್ತೀರ್ಣದ ಭೂಮಿಯನ್ನು 3೦ ವರ್ಷಗಳವರೆಗೆ ಗುತ್ತಿಗೆ ನೀಡಬಹುದು ಎಂದು ಈ ಹಿಂದಿನ ಸರ್ಕಾರ ಕಾನೂನು ಮಾಡಿದೆ ಎಂದರು.

ಇದಕ್ಕಾಗಿ ಈಗಾಗಲೇ ಅರ್ಜಿ ವಿತರಣೆ ಮಾಡಲಾಗುತ್ತಿದೆ. ನೆರೆಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅರ್ಜಿ ಸ್ವೀಕಾರ ಮಾಡಲಾಗುತ್ತಿದೆ. ಆದರೆ ಹಾಸನ ಜಿಲ್ಲೆಯಲ್ಲಿ ಈವರೆಗೂ ಅರ್ಜಿಯನ್ನೇ ಸ್ವೀಕಾರ ಮಾಡುತ್ತಿಲ್ಲ ಎಂದು ದೂರಿದರು.

ತಹಸೀಲ್ದಾರ್ ಕಚೇರಿಯಲ್ಲಿ ಕೇಳಿದರೆ ತಾಂತ್ರಿಕ ಸಮಸ್ಯೆ, ಆನ್‌ಲೈನ್ ಪೋರ್ಟ್ ಓಪನ್ ಆಗುತ್ತಿಲ್ಲ ಎಂದೆಲ್ಲಾ ಹೇಳಲಾಗುತ್ತಿದೆ.ಬೇರೆ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲಾಗುತ್ತಿದೆ. ಆದರೆ ಹಾಸನದಲ್ಲಿ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.

ಆಡಳಿತದ ಪಕ್ಷದ ಶಾಸಕರು, ಸಕಲೇಶಪುರ, ಆಲೂರು, ಬೇಲೂರು ತಾಲೂಕುಗಳಲ್ಲಿ ಗೆದ್ದಿಲ್ಲ ಎಂಬ ರಾಜಕೀಯ ಕಾರಣಕ್ಕೆ ಹೀಗೆ ಮಾಡಲಾಗುತ್ತಿದೆಯೇ ಎಂಬ ಅನುಮಾನ ಹೊರ ಹಾಕಿದ ಅವರು, ಇದು ನಿಜವೇ ಆಗಿದ್ದರೆ ನಾವೂ ಕೂಡ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ಅವರನ್ನು ಕೇಳಿದರೆ ಮುಂದಿನ ಒಂದು ತಿಂಗಳಲ್ಲಿ ಪೋರ್ಟಲ್ ಓಪನ್ ಮಾಡಲಾಗುವುದು ಎಂದರು. ಆದರೆ ಈವರೆಗೂ ಆಗಿಲ್ಲ ಎಂದು ದೂರಿದರು.

ತಾಂತ್ರಿಕ ಕಾರಣ ನೀಡಿ ಅರ್ಜಿ ಸ್ವೀಕರಿಸದೇ ಹೋದರೆ ಮುಂದಿನ ದಿನಗಳಲ್ಲಿ ಸಣ್ಣಪುಟ್ಟ ಒತ್ತುವರಿದಾರರಿಗೆ ಅನನುಕೂಲ ಆಗಲಿದೆ. ಇನ್ನಾದರೂ ಜಿಲ್ಲಾಡಳಿತ ನಿರ್ಲಕ್ಷ್ಯ ತೋರದೆ ಅರ್ಜಿ ಸ್ವೀಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಸಕಲೇಶಪುರ ಪುರಸಭೆ ಸದಸ್ಯ ಪ್ರಜ್ವಲ್, ಕಾಫಿ ಬೆಳೆಗಾಗ ಕೌಶಿಕ್ ಇದ್ದರು.