ಹಾಸನ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ೨೦೨೪-
೨೯ನೇ ಸಾಲಿಗೆ ತಾಲೂಕು ಶಾಖೆ, ಯೋಜನಾ ಶಾಖೆ, ಜಿಲ್ಲಾ ಶಾಖೆಗಳ ನಿರ್ದೇಶಕರು ಮತ್ತು ಪದಾಧಿಕಾರಿಗಳು ಜಿಲ್ಲೆ ಹಾಗೂ ರಾಜ್ಯಾಧ್ಯಕ್ಷರ ಚುನಾವಣೆಗಳಿಗೆ ದಿನಾಂಕ ನಿಗದಿ ಪಡಿಸಲಾಗಿದೆ.
ಕಳೆದ ಸೆ.೧೨ ರಂದು ಅಧಿಸೂಚನೆ ಸಹ ಹೊರ ಬಿದ್ದಿದೆ.ಈ ಹಿನ್ನೆಲೆ ಯಲ್ಲಿ ಜಿಲ್ಲೆಯಲ್ಲೂ ಚುನಾವಣೆಗಾಗಿ ಸಿದ್ಧತೆ, ಪ್ರಚಾರ, ಪರಸ್ಪರ ಓಲೈಸುವ ಕಾರ್ಯದಲ್ಲಿ ವಿವಿಧ ಸ್ಥಾನಗಳ ಸ್ಪರ್ಧಾಕಾಂಕ್ಷಿಗಳು ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ.
ತಾಲೂಕು ಶಾಖೆಗಳ ನಿರ್ದೇಶಕ ಚುನಾವಣೆ ಮೊದಲು ನಡೆಯಲಿದ್ದು, ನಂತರ ತಾಲೂಕು ಅಧ್ಯಕ್ಷರ ಎಲೆಕ್ಷನ್ ನಡೆಯಲಿದೆ. ಬಳಿಕ ಜಿಲ್ಲಾಧ್ಯಕ್ಷರ ಆಯ್ಕೆಗೆ ತಾಲೂಕುಗಳ ಅಧ್ಯಕ್ಷರು ಮತ್ತು ನಗರ ಹಾಸನ ನಗರ, ತಾಲೂಕು ವ್ಯಾಪ್ತಿಯ ನಿರ್ದೇಶಕರು ಮತ ಚಲಾಯಿಸಲಿದ್ದಾರೆ.
ಶ್ರೀನಿವಾಸ್-ಶಿವಸ್ವಾಮಿ ಕಣಕ್ಕೆ:
ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಸಂಘದ ಮಾಜಿ ಅಧ್ಯಕ್ಷ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಕೆ.ಎಂ. ಶ್ರೀನಿವಾಸ್ ಹಾಗೂ ಹಾಲಿ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಹಿರಿಯ ವೈದ್ಯಕೀಯ ಪ್ರಯೋಗಶಾಲೆ ಅಧಿಕಾರಿ ಸಿ.ಎಸ್.ಶಿವಸ್ವಾಮಿ ಕಣಕ್ಕಿಳಿಯುತ್ತಿದ್ದಾರೆ.
ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುವ ನಿರ್ದೇಶಕ ಆಯ್ಕೆ ಮಾಡಿಕೊಳ್ಳಲು ಬೇಕಾದ ಕಾರ್ಯತಂತ್ರ ಹೆಣೆಯುತ್ತಿದ್ದಾರೆ. ಇವರಲ್ಲದೆ ಮತ್ತಷ್ಟು ಮಂದಿ ಚುನಾವಣಾ ಅಖಾಡಕ್ಕೆ ಧುಮುಕ ಬಹುದು ಎಂಬ ಗುಸು ಗುಸು ಇದೆ.
ಒಟ್ಟು ೭೪ ಸ್ಥಾನ: ಹಾಸನ ನಗರ ವ್ಯಾಪ್ತಿಯಲ್ಲಿ ಭೂಮಾಪನ, ಕಂದಾಯ, ಭೂ ದಾಖಲೆ, ಎನ್‌ಸಿಸಿ, ಕಾರಾಗೃಹ, ಖಜಾನೆ, ನಗರ/ಗ್ರಾಮಾಂತರ ಯೋಜನಾ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ ಉದ್ಯೋಗ ಮತ್ತು ತರಬೇತಿ ಇಲಾಖೆ ಸೇರಿದಂತೆ ಒಟ್ಟು ೬೬ ಮತ ಕ್ಷೇತ್ರಗಳಿದ್ದು, ಇಷ್ಟು ಕ್ಷೇತ್ರಗಳಿಂದ ೬೬ ಮಂದಿ ನಿರ್ದೇಶಕರು ಆಯ್ಕೆಯಾಗಲಿದ್ದಾರೆ.
ಉಳಿದಂತೆ ೮ ತಾಲೂಕುಗಳಿಂದ ಆಯಾ ನಿರ್ದೇಶಕರಿಂದ ಆಯ್ಕೆಯಾಗುವ ತಾಲೂಕು ಅಧ್ಯಕ್ಷರು (ಗೊರೂರು ಹೇಮಾವತಿ ಜಲಾಶಯ ಯೋಜನಾ ವಿಭಾಗ ಸೇರಿ) ಒಳಗೊಂಡಂತೆ ಒಟ್ಟು ೭೪ ಮಂದಿ ನಿರ್ದೇಶಕರು ಜಿಲ್ಲಾಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯರು ಮತದಾನದ ಮೂಲಕ ಆಯ್ಕೆ ಮಾಡಲಿದ್ದಾರೆ. ಜಿಲ್ಲೆಯಲ್ಲಿ ಅಂದಾಜು ೨೫ ಸಾವಿರ ಸರ್ಕಾರಿ ನೌಕರರು ಮತ ಚಲಾಯಿಸುವ ಅರ್ಹತೆ ಪಡೆದಿದ್ದಾರೆ. ಆದರೆ ೮-೧೦ ಸಾವಿರ ಹುದ್ದೆಗಳು ಖಾಲಿ ಇರುವುದರಿಂದ ೧೫ ಸಾವಿರ ಮಂದಿ ವೋಟ್ ಮಾಡಲಿದ್ದಾರೆ. ಪೊಲೀಸ್, ವೈದ್ಯಕೀಯ, ವಿಶ್ವವಿದ್ಯಾನಿಲಯ, ಕೆಎಸ್‌ಆರ್‌ಟಿಸಿ ನೌಕರರಿಗೆ ಮತದಾನದ ಅವಕಾಶ ಇಲ್ಲ.
ಚುನಾವಣಾ ವೇಳಾಪಟ್ಟಿ ಇಂತಿದೆ:
ತಾಲೂಕು ಶಾಖೆ ಹಾಗೂ ಯೋಜನಾ ಶಾಖೆಗಳ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನಕ್ಕೆ ಇದೇ ತಿಂಗಳು ಅ.೯ ರಿಂದ ೨೮ ರ ವರೆಗೆ ಚುನಾವಣೆ ನಡೆಯಲಿವೆ.
ತಾಲೂಕು ಶಾಖೆಗಳ ತಾಲೂಕು ಅಧ್ಯಕ್ಷರು, ಯೋಜನಾ ಶಾಖೆಗಳ ಅಧ್ಯಕ್ಷರು ಹಾಗೂ ತಾಲೂಕು-ಯೋಜನಾ ಶಾಖೆಗಳ ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಚುನಾವಣೆ ಅ.೩೦ ರಿಂದ ನವೆಂಬರ್ ೧೬ ರ ವರೆಗೆ ಜರುಗಲಿವೆ.
ಜಿಲ್ಲಾ ಶಾಖೆಗಳ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಚುನಾವಣೆ ಅ.೨೦ ರಿಂದ ನವೆಂಬರ್ ೧೬ ರ ವರೆಗೆ ನಡೆಯಲಿವೆ.
ಜಿಲ್ಲಾ ಶಾಖೆಗಳ ಅಧ್ಯಕ್ಷರು, ಜಿಲ್ಲಾ ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯರ ಚುನಾವಣೆಗಳು ನವೆಂಬರ್ ೧೯ ರಿಂದ ಡಿಸೆಂಬರ್ ೪ ರ ವರೆಗೆ ನಡೆಯಲಿವೆ. ಅಂತಿಮವಾಗಿ ರಾಜ್ಯ ಸಂಘದ ಅಧ್ಯಕ್ಷರು ಮತ್ತು ರಾಜ್ಯ ಖಜಾಂಚಿ ಸ್ಥಾನಗಳಿಗೆ ಡಿ.೯ ರಿಂದ ೨೭ ರ ವರೆಗೆ ಎಲೆಕ್ಷನ್ ನಡೆಯಲಿವೆ ಎಂದು ಚುನಾವಣಾಧಿಕಾರಿ ಎ.ಹನುಮ ನರಸಯ್ಯ ತಿಳಿಸಿದ್ದಾರೆ.