ನೌಕರರ ಸಂಘ; ಐಪಿಎಲ್ ಮಾದರಿ ಚುನಾವಣೆಯಲ್ಲಿ ಎಚ್.ಡಿ.ರೇವಣ್ಣ-ಬಾಗೂರು ಮಂಜೇಗೌಡ ಒಗ್ಗೂಡಿ ನನ್ನನ್ನು ಸೋಲಿಸಿದರು ಎಂದ ಕೆ.ಎಂ.ಶ್ರೀನಿವಾಸ್

ಹಾಸನ: ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಒಟ್ಟಾಗಿ ಬಡ ಉಪನ್ಯಾಸಕನಾದ ನನ್ನ  ವಿರುದ್ಧ ರಾಜಕೀಯ ಮಾಡಿ ಸೋಲಿಸಿದರು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನದ ಪರಾಜಿತ ಅಭ್ಯರ್ಥಿ ಕೆ.ಎಂ.ಶ್ರೀನಿವಾಸ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆ ಇತಿಹಾಸ ಸೃಷ್ಟಿಸಿದೆ. ಆತ್ಮೀಯರು ಎನಿಸಿಕೊಂಡಿದ್ದ ನಿರ್ದೇಶಕರು ಮೋಸ ಮಾಡಿದರು. ಡಿ. 3ರ ರಾತ್ರಿಯಿಂದ ಬೆಳಿಗ್ಗೆವರೆಗೆ ನಡೆದ ವ್ಯವಹಾರದಿಂದ ನಾನು ಸೋಲಬೇಕಾಯಿತು.

ಬಾಗೂರು ಮಂಜೇಗೌಡ, ಹೆಚ್.ಡಿ.ರೇವಣ್ಣ ಒಂದಾಗಿದ್ದರಿಂದ ನಾನು ಅನಾಥನಾದೆ. ಈ ನಡೆ ಭಾರಿ ಬೇಸರ ತರಿಸಿದೆ. ಸಂಘದ ಹಿತದೃಷ್ಟಿಯಿಂದ ಯಾರೂ ನೋಡಲಿಲ್ಲ ಎಂದರು.

ಐಪಿಎಲ್ ಮಾದರಿಯಲ್ಲಿ ಈ ಚುನಾವಣೆ ನಡೆಯಿತು. ಯಾರ್ಯಾರು ಎಲ್ಲೆಲ್ಲಿ ಒಂದಾದರು ಗೊತ್ತಾಗಲೇ ಇಲ್ಲ. ಶಿವಸ್ವಾಮಿ ಮತ್ತು ನಾನು ಒಟ್ಟಾದಾಗ ಬೆಂಬಲಿಸಿದವರು ನಂತರ ಮೋಸ ಮಾಡಿದರು. ಐದು ವರ್ಷಗಳ ಹಿಂದೆಯೂ ಇದೇ ರೀತಿ ರಾಜಕೀಯ ಮಾಡಿ ನನ್ನ ಸೋಲಿಸಿದರು.

ನಮ್ಮ ತಂಡ ಗೆಲ್ಲಬೇಕೆಂಬ ಆಸೆ ಎಲ್ಲರದ್ದಾಗಿತ್ತು‌. ಇನ್ನು ಮುಂದೆ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನನಗೆ ಈ ಬಾರಿ ಚುನಾವಣೆ ನಡೆದ ಮಾದರಿಯಿಂದ ಬೇಜಾರಾಗಿದೆ‌ ಎಂದರು.

ಸಂಘದ ನಿರ್ದೇಶಕರಾದ ಮಧು,ಟಿ.ರಾಜು, ವಿಶ್ವನಾಥ ಇದ್ದರು.