ಕಾಡಾನೆ ಸೆರೆ ಕಾರ್ಯಾಚರಣೆ ವರದಿಗಾರನ ಕ್ಯಾಮರಾ, ಮೊಬೈಲ್ ಕಿತ್ತುಕೊಂಡು ಅರಣ್ಯ ಸಿಬ್ಬಂದಿ ದೌರ್ಜನ್ಯ

ಪರಿಸರವಾದಿ ಹುರುಡಿ ವಿಕ್ರಂ ಅವರ ಕ್ಯಾಮರಾವನ್ನೂ ಕಿತ್ತುಕೊಂಡರು

ಹಾಸನ: ಸಕಲೇಶಪುರ ತಾಲೂಕು ನಿಡಿಗೆರೆಯಲ್ಲಿ ಕಾಡಾನೆ ಸೀಗೆ ಸೆರೆ‌ ಕಾರ್ಯಾಚರಣೆ ಚಿತ್ರೀಕರಿಸುತ್ತಿದ್ದ ಪತ್ರಕರ್ತ ಶರತ್ ಅವರ ಕ್ಯಾಮರಾಗಳಯ ಹಾಗೂ ಮೊಬೈಲ್ ಕಿತ್ತುಕೊಂಡು ಅರಣ್ಯ ಇಲಾಖೆ ಸಿಬ್ಬಂದಿ ದೌರ್ಜನ್ಯ ಎಸಗಿದ್ದಾರೆ.

ನಿಡಿಗೆರೆಯಲ್ಲಿ ದೈತ್ಯ ಆನೆ ಸೀಗೆಯನ್ನು ಇಂದು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಅರಿವಳಿಕೆ ಮದ್ದು ನೀಡಿತ್ತು. ಕಿಮೀ.ಗಳು ಓಡಿದ ಆನೆ ಪ್ರಜ್ಞೆ ಕಳೆದುಕೊಂಡು ಕೆಳಗೆ ಬಿತ್ತು.

ಅದನ್ನು ಅರಣ್ಯ ಸಿಬ್ಬಂದಿ ಸೆರೆ ಹಿಡಿಯುತ್ತಿದ್ದಾಗ ಆ ದೃಶ್ಯವನ್ನು ಪ್ರಜೋದಯ ದಿನಪತ್ರಿಕೆ ವರದಿಗಾರ ಶರತ್ ಚಿತ್ರೀಕರಿಸುತ್ತಿದ್ದರು.

ಆಗ ಡಿಎಫ್ಒ ಸೌರಭ್ ಅವರ ಸಮ್ಮುಖದಲ್ಲಿಯೇ ಯಸಳೂರು ವಿಭಾಗದ ಇಬ್ಬರು ಅರಣ್ಯ ಸಿಬ್ಬಂದಿ ವಿನಾಕಾರಣ ಶರತ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೊಬೈಲ್, ಡಿಜಿಟಲ್ ಕ್ಯಾಮರಾ ಹಾಗೂ ಆ್ಯಕ್ಷನ್ ಕ್ಯಾಮರಾಗಳನ್ನು ಕಿತ್ತುಕೊಂಡಿದ್ದಾರೆ.

ಶರತ್ ಅವರು ತಾವು ಪತ್ರಕರ್ತ ಎಂದು ಗುರುತಿನ ಪತ್ರ ತೋರಿಸಿದಾಗ ಮಾಧ್ಯಮಗಳನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದೆಲ್ಲಕ್ಕೂ ಡಿಎಫ್ಒ ಮೌನ ಸಮ್ಮತಿ ನೀಡಿ ನಿಂತಿದ್ದರು.

ಸದಾ ಕಾಡಾನೆಗಳನ್ನು ಸಮರ್ಥಿಸಿ ಮಾತನಾಡುವ, ಆನೆ ಸೆರೆ ಕಾರ್ಯಾಚರಣೆಗಳಲ್ಲಿ ಸ್ವಯಂ ಸೇವಕರಾಗಿ ಭಾಗವಹಿಸುವ ಪರಿಸರವಾದಿ ಹುರುಡಿ ವಿಕ್ರಂ ಅವರ ಮೊಬೈಲನ್ನು ಕೂಡ ಅರಣ್ಯ ಸಿಬ್ಬಂದಿ ಕಿತ್ತುಕೊಂಡಿದ್ದಾರೆ.