ಹಾಸನ: ಕೇತಗಾನಹಳ್ಳಿಯಲ್ಲಿ ಜಮೀನು ಸರ್ವೆ ವಿಚಾರಕ್ಕೆ ಸಂಬಂಧಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, “1985 ರಲ್ಲಿ ಈ ಜಮೀನನ್ನು ಖರೀದಿ ಮಾಡಲಾಗಿದೆ. ಕುಮಾರಣ್ಣ ರಾಜಕೀಯಕ್ಕೆ ಬಂದಿರಲಿಲ್ಲ. ಅವರು ತಮ್ಮ ವೃತ್ತಿಜೀವನವನ್ನು ಚಲನಚಿತ್ರ ಹಂಚಿಕೆದಾರರಾಗಿ ಆರಂಭಿಸಿದ್ದರು. ಈ ವೃತ್ತಿಯಲ್ಲಿ ದುಡಿದ ಹಣದಿಂದ ರಾಮನಗರ ಜಿಲ್ಲೆಯಲ್ಲಿ ರಾಜಕೀಯವಾಗಿ ಗಟ್ಟಿಯಾಗಿ ನೆಲೆಸಲು ದೇವೇಗೌಡರು ಈ ಜಮೀನನ್ನು ಖರೀದಿಸಿದ್ದಾರೆ” ಎಂದು ಸ್ಪಷ್ಟಪಡಿಸಿದರು.
ಇಲ್ಲಿನ ಜಮೀನಿಗೆ ಸಂಬಂಧಿಸಿದಂತೆ ಇತ್ತೀಚೆಗೆ ನ್ಯಾಯಾಲಯದ ನಿರ್ದೇಶನ ಬಂದಿದ್ದು, ಕೆಲವು ಸರ್ವೆ ನಂಬರ್‌ಗಳ ವರದಿ ನೀಡುವಂತೆ ಆದೇಶಿಸಲಾಗಿದೆ. “ನಾವು ಕಾನೂನಾತ್ಮಕವಾಗಿ ಹೋರಾಟ ಮಾಡಲಿದ್ದೇವೆ. ಇದು ಕೃಷಿ ಭೂಮಿ ಮತ್ತು ನಾವು ಇದನ್ನು ಕೃಷಿ ಚಟುವಟಿಕೆಗಾಗಿ ಬಳಸಿಕೊಂಡಿದ್ದೇವೆ. ಯಾವುದೇ ಕಮರ್ಷಿಯಲ್ ಕಟ್ಟಡವನ್ನು ಇಲ್ಲಿ ನಿರ್ಮಿಸಿಲ್ಲ ಹಾಗೂ ಆರ್ಥಿಕ ಲಾಭಕ್ಕಾಗಿ ಖರೀದಿ ಮಾಡಿಲ್ಲ” ಎಂದು ನಿಖಿಲ್ ಹೇಳಿದರು.
“ನಾವು ಮೂಲತಃ ಕೃಷಿಕರು. ನಮ್ಮ ತೋಟದಲ್ಲಿ ಎಷ್ಟು ಅಡಿಕೆ, ಎಷ್ಟು ತೆಂಗಿಮರಗಳಿವೆ ಎಂಬುದನ್ನು ಬಂದು ನೋಡಬಹುದು”. ಈ ಜಮೀನು ವಿವಾದ ಹೊಸದೇನಲ್ಲ, ಕಳೆದ ಹದಿನೈದು-ಇಪ್ಪತ್ತು ವರ್ಷಗಳಿಂದಲೂ ಇದೇ ಆರೋಪಗಳು ಕೇಳಿ ಬರುತ್ತಿವೆ. ಆದರೆ ಇಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂಬುದನ್ನು ಪುನರುಚ್ಛರಿಸಿದರು.
ಈ ವಿವಾದದ ರಾಜಕೀಯ ಹಿನ್ನೆಲೆಯಲ್ಲಿ, ಕೆಲವು ಕಾಂಗ್ರೆಸ್ ನಾಲ್ಕೈದು ಮಹಾನ್ ನಾಯಕರು ಕುಮ್ಮಕ್ಕು ನೀಡಿ ಮಾಧ್ಯಮದ ಮುಂದೆ ಸುಳ್ಳು ಆರೋಪಗಳನ್ನು ಮಾಡಿಸುತ್ತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು. “ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಈ ಆರೋಪಗಳು ನಮಗೆ ಹೊಸತಲ್ಲ.” ಎಂದರು.
ಇನ್ನು ಜೆಡಿಎಸ್ ಹಿರಿಯ ನಾಯಕ ಜೆ.ಟಿ.ದೇವೇಗೌಡರ ಅಸಮಾಧಾನ ಕುರಿತಂತೆ ಪ್ರತಿಕ್ರಿಯೆ ನೀಡಿದ ನಿಖಿಲ್, “ಜಿ.ಟಿ. ದೇವೇಗೌಡರು ನಮ್ಮ ಪಕ್ಷದ ಹಿರಿಯ ಮುಖಂಡರು. ಅವರು ಜೆಡಿಎಸ್ ಚಿಹ್ನೆಯ ಅಡಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರೂ ಕುಳಿತು ಚರ್ಚೆ ಮಾಡಲಿದ್ದೇವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಿ, ಸರ್ಕಾರದ ವೈಫಲ್ಯಗಳನ್ನು ಜನತೆಗೆ ತಲುಪಿಸಲು ಕೆಲಸ ಮಾಡಲಿದ್ದೇವೆ” ಎಂದು ಹೇಳಿದರು.