ಗೃಹಲಕ್ಷ್ಮಿ ಕಾಂಗ್ರೆಸ್ ಚುನಾವಣಾ ಪ್ರಚಾರದ ಗ್ಯಾರೆಂಟಿ; ನಿಖಿಲ್ ಕುಮಾರಸ್ವಾಮಿ ಟೀಕಾ ಪ್ರಹಾರ

ಹಾಸನ: ಗೃಹಲಕ್ಷ್ಮಿ ಯೋಜನೆ ಚುನಾವಣಾ ಪ್ರಚಾರಕ್ಕಾಗಿ ನೀಡುವ ಗ್ಯಾರೆಂಟಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದರು.

ನಗರದಲ್ಲಿಂದು ಜಿಪಂ, ತಾಪಂ ಚುನಾವಣೆ ಪೂರ್ವಸಿದ್ಧತೆ ಸಂಬಂಧ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಮುಖಂಡರ ಸಭೆ ನಡೆಸಿ ಅವರು ಮಾತನಾಡಿದರು.

“ರಾಜ್ಯದ ತಾಯಂದಿರು ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಕಾದು ಕುಳಿತಿದ್ದಾರೆ. ಆದರೆ, ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಮುಂತಾದ ಕ್ಷೇತ್ರಗಳಲ್ಲಿ ಮಾತ್ರ ಹಣ ವಿತರಣೆಯಾಗಿದೆ. ಜಿ.ಪಂ., ತಾ.ಪಂ. ಚುನಾವಣಾ ಘೋಷಣೆಯಾದ ಬಳಿಕ ಮಾತ್ರ ಹಣ ನೀಡುತ್ತಾರೆ. ಇದು ಕೇವಲ ಚುನಾವಣಾ ಪ್ರಚಾರಕ್ಕಾಗಿ ನೀಡುವ ಗ್ಯಾರಂಟಿ” ಎಂದು ಟೀಕಿಸಿದರು.

ಇದರಿಂದ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ನೇರವಾಗಿ ಜನರ ನಂಬಿಕೆ ಪಡೆಯಲು ಪ್ರಯತ್ನಿಸಲಿದೆ ಎಂದು ಅವರು ತಿಳಿಸಿದ್ದಾರೆ.

“ಮೈತ್ರಿ ಬಹಳ ಭದ್ರವಾಗಿದೆ. ಕೇಂದ್ರ ನಾಯಕರು ದೇವೇಗೌಡರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಅವರಿಗೆ ಎರಡು ಖಾತೆಗಳನ್ನು ನೀಡಿದ್ದಾರೆ” ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಗ್ಗಟ್ಟಾಗಿ ಕೆಲಸ ಮಾಡಿದ್ದನ್ನು ನೆನೆಸಿದ ಅವರು, ಮುಂದಿನ ಚುನಾವಣಾ ನಿರ್ಧಾರ ಕೇಂದ್ರ ನಾಯಕರು ಮತ್ತು ರಾಜ್ಯ ಕೋರ್ ಕಮಿಟಿ ಮಾಡಲಿದೆ ಎಂದರು. “ಚುನಾವಣೆಗಳಲ್ಲಿ ಗೆಲುವು-ಸೋಲು ಸಹಜ. ಸೋತರೆ ಮನೆಯಲ್ಲಿ ಕುಳಿತುಕೊಳ್ಳಲು ಆಗದು. ರಾಜ್ಯದ ಜನರ ಸಮಸ್ಯೆಗಳನ್ನು ಆಲಿಸಲು ನಾವು ತೊಡಗಿಸಿಕೊಳ್ಳಬೇಕು” ಎಂದರು.