ಶಾಸಕ ಕೆ.ಎಂ.ಶಿವಲಿಂಗೇಗೌಡ ವಿರುದ್ಧ ಎಫ್ಐಆರ್ ದಾಖಲಿಸಲು ಒತ್ತಾಯ; ಅರಸೀಕೆರೆ ಪೊಲೀಸ್ ಠಾಣೆ ಎದುರು ಅಹೋರಾತ್ರಿ ಧರಣಿ ಆರಂಭಿಸಿದ ಜೆಡಿಎಸ್ ಕಾರ್ಯಕರ್ತರು

ಹಾಸನ: ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಣ ಹಂಚಿಕೆ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ವೈರಲ್ ಆಡಿಯೋ ಪ್ರಕರಣವನ್ನು ಹೋರಾಟದ ಅಸ್ತ್ರವಾಗಿ ಬಳಸಲು ಮುಂದಾಗಿರುವ ಜೆಡಿಎಸ್ ಮುಖಂಡರು, ಕೆಎಂಶಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿ ಅರಸೀಕೆರೆ ಪೊಲೀಸ್ ಠಾಣೆ ಎದುರು ಕಾರ್ಯಕರ್ತರೊಂದಿಗೆ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.

ನಗರ ಪೊಲೀಸ್ ಠಾಣೆ ಎದುರು ಸೇರಿದ ಜೆಡಿಎಸ್ ಕಾರ್ಯಕರ್ತರು ಶಾಸಕ ಶಿವಲಿಂಗೇಗೌಡ ಅವರ ವಿರುದ್ಧ ಪ್ರಕರಣ ದಾಖಲಿಸುವವರೆಗೂ ಹೋರಾಟ ನಡೆಸುವುದಾಗಿ ಧರಣಿ ಕುಳಿತರು.

ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಆಡಿಯೋ ಸಂಭಾಷಣೆಯಲ್ಲಿನ ವಿವರಗಳನ್ನು ಉಲ್ಲೇಖಿಸಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿಗಳೊಂದಿಗೆ ಶಾಮೀಲಾಗಿ ಶಾಸಕ ಶಿವಲಿಂಗೇಗೌಡ, ಲೋಕಸಭೆ ಚುನಾವಣೆಯಲ್ಲಿ ಮತದಾರರಿಗೆ ಕೋಟ್ಯಂತರ ರೂ. ಹಣ ಹಂಚಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಆಡಿಯೋದಲ್ಲಿ ಉಲ್ಲೇಖವಾಗಿರುವ ಎಲ್ಲ ಕಾಂಗ್ರೆಸ್ ನಾಯಕರ ಮೇಲೂ ಕೇಸ್ ದಾಖಲಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

ದೂರು ಆಧರಿಸಿ ಎಫ್ಐಆರ್ ದಾಖಲಿಸಬೇಕು ಎಂದು ಪಟ್ಟು ಹಿಡಿದಿರುವ ಜೆಡಿಎಸ್ ಮುಖಂಡರು ಎನ್.ಆರ್.ಸಂತೋಷ್ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಇದು ಅರಸೀಕೆರೆ ಕ್ಷೇತ್ರದಲ್ಲಿ ತೀವ್ರ ರಾಜಕೀಯ ತಿಕ್ಕಾಟಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ.

ಅರಸೀಕೆರೆ ಯಲ್ಲಿ ಶಾಸಕರಾದ ಕೆ ಎಂ ಶಿವಲಿಂಗೇಗೌಡ ವಿರುದ್ಧ FIR ದಾಖಲಿಸುವಂತೆ ಒತ್ತಾಯಿಸಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರಿಂದ ಪೊಲೀಸ್ ಠಾಣೆ ಎದುರು ಪ್ರತಿಭಟನೆ