ಸೂರಜ್ ರೇವಣ್ಣ ಜೈಲಿನಿಂದ ರಿಲೀಸ್; ಯಾರ ಕೈವಾಡ ಎನ್ನುವುದು ಗೊತ್ತಾಗಲಿದೆ ಎಂದರು ಎಮ್ಮೆಲ್ಸಿ

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನದಲ್ಲಿದ್ದ ಜೆಡಿಎಸ್ ಎಂಎಲ್‌ಸಿ ಸೂರಜ್ ರೇವಣ್ಣ ಅವರು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದು, ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದ ಅವರನ್ನು ಅಭಿಮಾನಿಗಳು ಜೈಕಾರ ಹಾಕಿ ಬರಮಾಡಿಕೊಂಡಿದ್ದಾರೆ.

ಅಸಹಜ ಲೈಂಗಿಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಗಳ ಬಗ್ಗೆ ಮಾತನಾಡಿರುವ ಅವರು, ನಾನೇನು ತಪ್ಪು ಮಾಡಿಲ್ಲ. ತನಿಖಾಧಿಕಾರಿಗಳಿಗೆ ಸಹಕಾರ ಕೊಟ್ಟಿದ್ದೀವಿ. ಇದು ನಮ್ಮ ವಿರುದ್ಧ ಮಾಡಿರುವ ಷಡ್ಯಂತ್ರ, ಈ ಬಗ್ಗೆ ಯಾರ ಕೈವಾಡ ಇದೆ ಎಂದು ಸದ್ಯದಲ್ಲೇ ಗೊತ್ತಾಗುತ್ತದೆ ಎಂದು ಹೇಳಿದರು.

ನನ್ನ ಬಗ್ಗೆ ದೂರು ನೀಡಿರುವ ಶಿವಕುಮಾರ್ ಎಂಬಾತ ಯಾರು ಎಂದು ನನಗೆ ಗೊತ್ತಿಲ್ಲ. ಆತ ನನ್ನ ಆಪ್ತನಲ್ಲ. ನನ್ನ ಬಳಿ ಆ ಹೆಸರಿನ ಕಾರು ಚಾಲಕರೇ ಇರಲಿಲ್ಲ. ಎರಡು ಮೂರು ದಿನದಲ್ಲಿ ಎಲ್ಲವನ್ನು ಮಾತನಾಡುತ್ತೇನೆ. ಇದು ನನ್ನ ವಿರುದ್ಧ ಮಾಡಿರುವ ರಾಜಕೀಯ ಷಡ್ಯಂತ್ರ ಎಂದರು.

ಹಾಸನ ಜಿಲ್ಲೆಯಲ್ಲಿ ರಾಜಕೀಯವಾಗಿ ನಮ್ಮವಿರುದ್ಧ ಪಿತೂರಿ ಮಾಡಿದ್ದಾರೆ. ಸತ್ಯವನ್ನು ಜಾಸ್ತಿ ದಿನ ಮುಚ್ಚಿಡೋಕ್ಕಾಗಲ್ಲ. ನಮ್ಮ ಕುಟುಂಬದ ಮೇಲೆ ಷಡ್ಯಂತ್ರ ಮಾಡಿ ತೇಜೋವಧೆ ಮಾಡಿದ್ದಾರೆ. ತೇಜೋವಧೆ ಮಾಡುವ ದುರುದ್ದೇಶದಿಂದ ಸುಳ್ಳು ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಾರೆ ಎಂದರು ಸೂರಜ್ ಹೇಳಿದ್ರು

ನಾವು ಯಾವುದಕ್ಕೂ ಹೆದರಿಕೊಂಡು ಎಲ್ಲಿಗೂ ಓಡಿ ಹೋಗಲ್ಲ. ಎರಡು ಮೂರು ದಿನದಲ್ಲಿ ಎಲ್ಲದಕ್ಕೂ ಸ್ಪಷ್ಟನೆ ಕೊಡ್ತೀನಿ. ತಪ್ಪು ಮಾಡಿಲ್ಲ ಅನ್ನೋ ವಿಶ್ವಾಸವಿದೆ. ಕಾನೂನು ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ. ಇದರಿಂದ ಆದಷ್ಟು ಬೇಗ ಹೊರಬರುತ್ತೇನೆ. ಈ ಪ್ರಕರಣದಿಂದ ನನಗಾಗಲಿ ನನ್ನ ಕುಟುಂಬಕ್ಕಾಗಲಿ ಯಾವುದೇ ಕಪ್ಪು ಚುಕ್ಕೆಯಾಗಿಲ್ಲ ಎಂದು ಸೂರಜ್ ಹೇಳಿದರು.