ಜನಕಲ್ಯಾಣ ಅಲ್ಲ, ದೇವೇಗೌಡರ ಕುಟುಂಬವನ್ನು ನಿಂದಿಸುವ ಸಮಾವೇಶ, ನಾವೂ ಜಿಲ್ಲೆಯಲ್ಲೇ ಶಕ್ತಿ ಪ್ರದರ್ಶನ ಮಾಡ್ತೀವಿ; ಕಾಂಗ್ರೆಸ್ ವಿರುದ್ಧ ಜೆಡಿಎಸ್ ಹಾಲಿ, ಮಾಜಿ ಶಾಸಕರ ವಾಗ್ದಾಳಿ

ಹಾಸನ: ಜೆಡಿಎಸ್ ಶಾಸಕರು ಮತ್ತು ಮಾಜಿ ಶಾಸಕರು ಇಂದು ಪತ್ರಿಕಾಗೋಷ್ಠಿಯಲ್ಲಿ ಜನ ಕಲ್ಯಾಣ ಸಮಾವೇಶದಲ್ಲಿನ ಕಾಂಗ್ರೆಸ್ ನಾಯಕರ ಟೀಕೆಗಳ ಬಗ್ಗೆ ಭಾರಿ ಆಕ್ರೋಶ ಹೊರಹಾಕಿ ರಾಜ್ಯ ಸರ್ಕಾರದ ವಿರುದ್ಧ ಕಠಿಣ ವಾಗ್ದಾಳಿ ನಡೆಸಿದರು.

ಶಾಸಕರಾದ ಸಿ.ಎನ್. ಬಾಲಕೃಷ್ಣ, ಎಚ್.ಪಿ. ಸ್ವರೂಪ್‌ಪ್ರಕಾಶ್, ಮತ್ತು ಮಾಜಿಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಕೆ.ಎಸ್. ಲಿಂಗೇಶ್ ಭಾಗಿಯಾಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ಜನಕಲ್ಯಾಣ ಸಮಾವೇಶವನ್ನು ಟೀಕಿಸಿ, “ಅದು ಜನಕಲ್ಯಾಣ ಸಮಾವೇಶ ಅಲ್ಲ, ಸ್ವಾರ್ಥ ಸಮಾವೇಶ. ದೇವೇಗೌಡರ ಕುಟುಂಬವನ್ನು ನಿಂದಿಸುವ ಸಮಾವೇಶ. ನಮ್ಮ ನಾಯಕರನ್ನು ನಿಂದಿಸುವುದರ ಹೊರತಾಗಿ ಸರ್ಕಾರ ಸಾಧನೆ ಏನೂ ಮಾಡಿಲ್ಲ,” ಎಂದು ಕಿಡಿಕಾರಿದರು.

ಆ ಸಮಾವೇಶಕ್ಕೆ ಬೆಲೆನೇ ಇಲ್ಲ. ಇಪ್ಪತ್ತು ತಿಂಗಳ ಆಡಳಿತದಲ್ಲಿ ಸರ್ಕಾರದ ಸಾಧನೆ ಏನು ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಒತ್ತಾಯಿಸಿದರು.

“ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರು ಸಾವಿಗೀಡಾಗುತ್ತಿದ್ದಾರೆ, ಸರ್ಕಾರಕ್ಕೆ ಇದು ಕಾಣುತ್ತಿಲ್ಲವೇ?” ಎಂದು ಪ್ರಶ್ನಿಸಿದರು.

“ಸಮಾಜ ಕಲ್ಯಾಣ ಇಲಾಖೆ ಸಂಪೂರ್ಣ ವಿಫಲವಾಗಿದೆ, 985 ಕೋಟಿ ರೂ. ಅನುದಾನ ಹಂಚಿಕೆಯಾಗಿಲ್ಲ ಎಂದು ದೂರಿದರು.

ನಿಂದನೆ ಅಕ್ಷಮ್ಯ:
“ಜೆಡಿಎಸ್‌ನ ನಾಯಕರನ್ನು ನಿಂದಿಸುವ ಕೆಲಸ ಸರ್ಕಾರದ ಕಾರ್ಯಕ್ರಮಗಳ ಭಾಗವಾಗಿದೆ” ಎಂದು ಆರೋಪಿಸಿದರು. “ನಮ್ಮ ಕಾರ್ಯಕರ್ತರನ್ನು ಆಮಿಷ ತೋರಿಸಿ ಸೆಳೆಯುವ ಕೆಲಸ ನಡೆಯುತ್ತಿದೆ. ಇದು ಜನಪ್ರತಿನಿಧಿ ಧರ್ಮಕ್ಕೆ ವಿರುದ್ಧ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯ ಹುದ್ದೆಗಳಲ್ಲಿ ದುರಾಡಳಿತ:
ವಾಲ್ಮೀಕಿ ನಿಗಮದ ಅಧಿಕಾರಿ ಸಾವನ್ನಪ್ಪಿದ್ದಾರೆ, ಬೋವಿ ನಿಗಮದಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸರ್ಕಾರ ಜನತೆಗೆ ದಿಕ್ಕು ತೋರಿಸುತ್ತಿಲ್ಲ, ಕೇವಲ ಪಕ್ಷದ ಲಾಭದಾಯಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.

ಹೋರಾಟದ ಎಚ್ಚರಿಕೆ:
“ನಮ್ಮ ನಾಯಕರನ್ನು ನಿಂದಿಸುವುದನ್ನು ನಿಲ್ಲಿಸದಿದ್ದರೆ, ಜನರ ಸಹನೆಗೂ ಒಂದು ಮಿತಿ ಇದೆ. ಇನ್ನು ಮುಂದೆ ನಾವು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ,” ಎಂದು ಎಚ್ಚರಿಕೆ ನೀಡಿದರು.