ಹಾಸನ: ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶವನ್ನು ಜೆಡಿಎಸ್ ಶಾಸಕ ಸಿ.ಎನ್. ಬಾಲಕೃಷ್ಣ ಕಟುವಾಗಿ ಟೀಕಿಸಿದ್ದು, “ಅದು ಜನಕಲ್ಯಾಣ ಸಮಾವೇಶವಲ್ಲ, ಐದು ವರ್ಷ ನಾನೇ ಮುಖ್ಯಮಂತ್ರಿ ಎಂಬ ಸಂದೇಶ ನೀಡಲು ಸಿದ್ದರಾಮಯ್ಯ ನಡೆಸಿದ ಸಮಾವೇಶ” ಎಂದು ಕಿಡಿಕಾರಿದರು.
“ಸಮಾವೇಶದಲ್ಲಿ ಸಿದ್ದರಾಮಯ್ಯ ಅವರ ಫೋಟೋಗಳೊಂದಿಗೆ, ‘ನಾನೇ ಸಿಎಂ’ ಎಂಬ ಸಂದೇಶ ನೀಡಲು ಅವರು ಪ್ರಯತ್ನಿಸಿದರು. ಇದಕ್ಕೆ ಡಿಸಿಎಂ ಕೂಡ ನೇರವಾಗಿ ಬೆಂಬಲ ನೀಡಿದ್ದಾರೆ” ಎಂದು ಬಾಲಕೃಷ್ಣ ಆರೋಪಿಸಿದರು.
ದೇವೇಗೌಡರ ಬಗ್ಗೆ ನಿಂದನೆ ಅಸಹ್ಯಕರ:
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಗ್ಗೆ ಸಮಾವೇಶದಲ್ಲಿ ಮಾಡಿದ ಟೀಕೆಯನ್ನು ಖಂಡಿಸಿದ ಅವರು,.ಭಾರತದ ಭೂಪಟದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದ ಮನುಷ್ಯ ಯಾರಾದರೂ ಇದ್ದರೆ ಅದು ದೇವೇಗೌಡರು. ಅವರು ಯಾವ ನಾಯಕರನ್ನೂ ಹಿಮ್ಮೆಟ್ಟಿಸುವ ಕೆಲಸ ಮಾಡಿಲ್ಲ. ಜಾತ್ಯತೀತವಾದ ನಿಲುವಿನಿಂದ ಎಲ್ಲರನ್ನು ಬೆಳೆಸಿದವರು” ಎಂದು ಅವರು ಪ್ರಶಂಸಿಸಿದರು. “ಅವರ ಬಗ್ಗೆ ಮಾತನಾಡುವ ಮುನ್ನ ಯೋಚಿಸಬೇಕು” ಎಂದು ಎಚ್ಚರಿಸಿದರು.
ಆಡಳಿತ ವೈಫಲ್ಯ:
ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಂಡಿವೆ. ಆದರೆ, ಹಳ್ಳಿಗಳಿಗೆ ಶಾಸಕರು ಹೋಗಲು ಸಾಧ್ಯವಾಗುತ್ತಿಲ್ಲ. ಅನುದಾನ ಕೊರತೆಯಿಂದ ಕಾಂಗ್ರೆಸ್ ಶಾಸಕರೇ ಅಸಮಾಧಾನಗೊಂಡಿದ್ದಾರೆ. ಅನುದಾನವಿಲ್ಲದೆ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಶೇ.90 ರಷ್ಟು ಕಂಟ್ರಾಕ್ಟರ್‌ಗಳು ಹತಾಶಗೊಂಡು ಕೆಲಸ ತೊರೆದಿದ್ದಾರೆ” ಎಂದು ದೂರಿದರು.
ಜೆಡಿಎಸ್ ಗಟ್ಟಿಯಾದ ಬೃಹತ್ ಶಕ್ತಿ:
“ಹಾಸನದಲ್ಲಿ ಜೆಡಿಎಸ್ ಅತ್ಯಂತ ಬಲವಾಗಿ ನಿಂತಿದೆ. ನಮ್ಮ ನೇತೃತ್ವದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳಿಗೆ ಸಾಕ್ಷಿಯ ಗುಡ್ಡೆಯಿದೆ. ಒಂದೇ ಒಂದಾದರೂ ಸಮಸ್ಯೆ ಇದ್ರೆ, ಓಪನ್ ಫೀಲ್ಡ್‌ನಲ್ಲಿ ಚರ್ಚೆಗೆ ಸಿದ್ಧ” ಎಂದರು.
ಬಿಜೆಪಿ-ಜೆಡಿಎಸ್ ಮೈತ್ರಿ ಹಾಗೂ ಮುಂದುವರಿಯುತ್ತದೆ:
“ಬಿಜೆಪಿ-ಜೆಡಿಎಸ್ ನಡುವಿನ ಮೈತ್ರಿ ಸ್ಪಷ್ಟವಾಗಿದೆ.ರಾಜ್ಯದಲ್ಲಿ ಎನ್‌ಡಿಎ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಮತ್ತಷ್ಟು ಬೆಳವಣಿಗೆ ಕಾಣಬಹುದಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.
“ನಮಗೆ ಸಮಾವೇಶಗಳ ಬಗ್ಗೆ ಹೊಟ್ಟೆಕಿಚ್ಚು ಇಲ್ಲ. ಆದರೆ, ಬಜೆಟ್‌ನಲ್ಲಿ ಕನಿಷ್ಠ ಅಭಿವೃದ್ಧಿಗೆ ಬೇಕಾದ ಅನುದಾನ ನೀಡುತ್ತಾರೋ ಇಲ್ಲವೋ ಗೊತ್ತಿಲ್ಲ” ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಬಲವಾಗಿ ನಿಂತಿದ್ದು, ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಅಭಿವೃದ್ಧಿ ಕಾರ್ಯಗಳು ಇದಕ್ಕೆ ಸಾಕ್ಷಿಯಾಗಿದೆ” ಎಂದು ಅವರು ಅಭಿಮಾನದಿಂದ ಹೇಳಿದರು.