ಹಾಸನದಲ್ಲಿ ಜೆಡಿಎಸ್ ಮುಗಿದಿಲ್ಲ, ಹೊಸ ಅಧ್ಯಾಯ ಆರಂಭವಾಗಿದೆ; ಎಚ್.ಡಿ.ರೇವಣ್ಣ

ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾಜಿ ಸಚಿವ ರೇವಣ್ಣ ಹೇಳಿಕೆ

ಬೇಲೂರು: ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಮುಗಿದಿಲ್ಲ, ನಮ್ಮ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ಇಂದಿನಿಂದ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.

ಪಟ್ಟಣದಲ್ಲಿಂದು ನಡೆದ ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜೆಡಿಎಸ್ ಮುಗಿಸಲು ಈ ಹಿಂದೆ ಅನೇಕ ಪ್ರಯತ್ನಗಳು ನಡೆದಿವೆ, ಆದರೆ ಯಾರಿಂದಲೂ ಅದು ಸಾಧ್ಯವಿಲ್ಲ. ನಡೆದಿರುವ ಎಲ್ಲಾ ಕಹಿ ಘಟನೆಗಳನ್ನು ಮರೆತು ಸಂಘಟಿತರಾಗಿ ಜಿಲ್ಲೆಯಲ್ಲಿ ಜೆಡಿಎಸ್‌ನ ಹೊಸ ಅಧ್ಯಾಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಜೆಡಿಎಸ್ ಸದಸ್ಯತ್ವ ಅಭಿಯಾನ ಆರಂಭಿಸುವಂತೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಸಲಹೆ ನೀಡಿದ್ದಾರೆ.

ಅದರಂತೆ ಇಲ್ಲಿನ ಶ್ರೀ ಚನ್ನಕೇಶವನ ಸನ್ನಿಧಿಯಿಂದ ಸದಸ್ಯತ್ವ ಅಭಿಯಾನವನ್ನು ಇಂದಿನಿAದ ಆರಂಭಿಸಲಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ವಿಸ್ತರಿಸಿ ಜೆಡಿಎಸ್‌ಗೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು ಎಂದರು.

ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ
ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅವರ ಸಲಹೆ ಜೊತೆಗೆ ಅವರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಹಿಂದಿನ ಲೋಪದೋಷ ಸರಿಪಡಿಸಿಕೊಂಡು ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಶ್ರಮ ವಹಿಸಲಾಗುವುದು ಎಂದರು.

ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿ, ದೇವೇಗೌಡರ ಕಾಲದಿಂದಲೂ ಜೆಡಿಎಸ್ ಅನೇಕ ಸಮಸ್ಯೆಗಳನ್ನು ಎದುರಿಸಿದೆ. ಮುಂದೆಯೂ ಅದೆಷ್ಟೇ ಸವಾಲುಗಳು ಎದುರಾದರೂ ಕಾರ್ಯಕರ್ತರು ಅವೆಲ್ಲವನ್ನು ಮೆಟ್ಟಿ ನಿಂತು ಎದುರಿಸುವ, ಪಕ್ಷ ಬಲ ವರ್ಧನೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಸದಸ್ಯರು ನೋಂದಣ ಮಾಡಿಕೊಳ್ಳುವ ಮೂಲಕ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷವನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.

ಜೊತೆಗೆ ಮುಂದೆ ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸನ್ನದ್ಧರಾಗುವಂತೆ ರೇವಣ್ಣ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಅರಕಲಗೂಡು ಶಾಸಕ ಎ.ಮಂಜು, ಸಕಲೇಶಪುರದ ಹೆಚ್.ಕೆ ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್, ಬೇಲೂರು ತಾಲೂಕು ಅಧ್ಯಕ್ಷ ಅನಂತ ಸುಬ್ಬರಾಯ, ಮುಖಂಡರಾದ ಇಂದಿರಮ್ಮ, ಭಾರತಿ ಅರುಣ್ ಕುಮಾರ್, ಜಾವಗಲ್ ರಾಜಶೇಖರ್, ಮರಿಯಪ್ಪ ದೊಡ್ಡ ವೀರೇಗೌಡ, ಮೋಹನ್ ಕುಮಾರ್, ಎಂ.ಎ.ನಾಗರಾಜ್, ಚಂದ್ರೇಗೌಡ, ರಂಗೇಗೌಡ, ಅಶ್ವತ್, ರವಿ, ಶ್ರೀನಿಧಿ, ಮಲ್ಲೇಗೌಡ, ಚಂದ್ರೇಗೌಡ, ಕಾಂತರಾಜು, ರಾಮಚಂದ್ರ, ಬಸವರಾಜ್, ನಾಗೇಶ್, ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ ಮೊದಲಾದವರಿದ್ದರು.