ಹಾಸನ: ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆ ಮಾಡದ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಅವರಿಂದ ನಾವು ಮೈತ್ರಿ ಧರ್ಮ ಕಲಿಯಬೇಕಿಲ್ಲ ಎಂದು ಜೆಡಿಎಸ್ ಹಾಸನ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ ತಿರುಗೇಟು ನೀಡಿದರು.
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಮೈತ್ರಿ ಧರ್ಮ ಪಾಲಿಸಲಿಲ್ಲ ಎಂಬ ಬಿಜೆಪಿ ಮುಖಂಡರ ಆರೋಪಗಳಿಗೆ ಅವರು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.
ಲೋಕಸಭೆ ಚುನಾವಣೆಯಲ್ಲಿ ಪ್ರೀತಂಗೌಡ ಹಾಗೂ ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅವರು ಮೈತ್ರಿಧರ್ಮ ಪಾಲನೆ ಮಾಡಲಿಲ್ಲ. ಕಾಂಗ್ರೆಸ್ ಗೆ ಮತ ಹಾಕಿ ಎಂದು ಅವರು ನೇರವಾಗಿಯೇ ತಮ್ಮ ಬೆಂಬಲಿಗರಿಗೆ ಹೇಳಿದ್ದರು. ಅವರ ಬೆಂಬಲಿಗರು ಕಾಂಗ್ರೆಸ್ ಪರವಾಗಿಯೇ ಪ್ರಚಾರ ನಡೆಸಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗ ಹಾಸನ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಮಾಡುವುದಾದರೂ ಸಂಸದ ಶ್ರೇಯಸ್ ಪಟೇಲ್ ಕಾಂಗ್ರೆಸ್ ನಾಯಕರ ಬದಲು ಪ್ರೀತಂಗೌಡ ಅವರ ಸಲಹೆ ಪಾಲಿಸುತ್ತಾರೆ ಎಂದು ಕಾಂಗ್ರೆಸ್ಸಿಗರೇ ಹೇಳುತ್ತಿದ್ದಾರೆ. ಅವರಿಂದ ನಾವು ಮೈತ್ರಿ ಧರ್ಮ ಕಲಿಯಬೇಕಿಲ್ಲ.
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನದ ಚುನಾವಣೆಯಲ್ಲಿ ನಾವು ಮೈತ್ರಿಧರ್ಮ ಪಾಲಿಸಿದ್ದೇವೆ ಬಿಜೆಪಿಯಿಂದ ಆಯ್ಕೆಯಾಗಿರುವ ಸದಸ್ಯೆ ಲತಾದೇವಿ ಅವರನ್ನು ಉಪಾಧ್ಯಕ್ಷರಾಗಿ ಮಾಡಿದ್ದೇವೆ ಎಂದರು.
ಜೆಡಿಎಸ್ ಜಿಲ್ಲಾ ವಕ್ತಾರ ಹೊಂಗೆರೆ ರಘು, ನಗರಸಭೆ ಸದಸ್ಯ ಕ್ರಾಂತಿ, ಮಾಜಿ ಅಧ್ಯಕ್ಷ ಅಕ್ಬರ್, ಮುಖಂಡ ಜಯರಾಂ ಇದ್ದರು.