ಪ್ರಜ್ವಲ್ ಪ್ರಕರಣ ಪಕ್ಷದ ಮೇಲೆ ಪರಿಣಾಮ ಬೀರಲ್ಲ, ನಮಗೆ ಯಾವುದೇ ಮುಜುಗರ ಇಲ್ಲ: ಜಿ.ಟಿ. ದೇವೇಗೌಡ

ಪ್ರಜ್ವಲ್‌ರೇವಣ್ಣ ತಪ್ಪು ಮಾಡಿದ್ರೆ ಶಿಕ್ಷೆ ಕೊಡಿ ಅಂತ ಹೇಳಿದ್ದೇವೆ

ಹಾಸನ: ನಮ್ಮ ಪಕ್ಷದಿಂದ ಪ್ರಜ್ವಲ್‌ರೇವಣ್ಣ ಅವರನ್ನು ಅಮಾನತು ಮಾಡಿದ್ದು ಅವರ ಬಂಧನ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರಲ್ಲ, ನಮಗೆ ಯಾವುದೇ ಮುಜುಗರ ಇಲ್ಲ ಎಂದು  ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಡಿ.ದೇವೇಗೌಡ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಎಸ್‌ಐಟಿ ತನಿಖೆಯನ್ನು ಸ್ವಾಗತಿಸಿದ್ದೆವು. ಪ್ರಜ್ವಲ್‌ರೇವಣ್ಣ ಬಂಧನಕ್ಕೆ ನಾವು ಸೇರಿ ಎಲ್ಲರೂ ಒತ್ತಾಯಿಸಿದ್ದೆವು. ಈಗ ಬಂಧನ ಆಗಿದೆ. ಅಲ್ಲಿಗೆ ನಮ್ಮ ಕೆಲಸ ಮುಗಿಯಿತು, ಎಸ್‌ಐಟಿ ತನಿಖೆಯನ್ನು ಮುಂದುವರಿಸುತ್ತದೆ ಎಂದರು.

ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದು ಕುಮಾರಸ್ವಾಮಿ ಮೊದಲೇ ಹೇಳಿದ್ದರು. ಪ್ರಜ್ವಲ್‌ರೇವಣ್ಣ ಜತೆಗೆ ಪೆನ್‌ಡ್ರೈವ್ ಹಂಚಿದವರ ಬಂಧನವೂ ಆಗಬೇಕು.

ತನಿಖೆಯಿಂದ ಸಂಪೂರ್ಣ ಉತ್ತರ ಹೊರ ಬರಲಿ. ನೂರಕ್ಕೆ ನೂರು ನಮ್ಮ ಪಕ್ಷ ಸಂತ್ರಸ್ತೆಯರ ಪರವಾಗಿ ಇರಲಿದೆ. ಎಸ್‌ಐಟಿ ತನಿಖೆ ಹೊರಬರುವವರೆಗೂ ನಾವೇನೂ ಹೇಳಲು ಆಗಲ್ಲ.
ಪ್ರಜ್ವಲ್‌ರೇವಣ್ಣ ತಪ್ಪು ಮಾಡಿದ್ರೆ ಶಿಕ್ಷೆ ಕೊಡಿ ಅಂತ ಹೇಳಿದ್ದೇವೆ ಎಂದರು.