ಹಾಸನ ನಗರಸಭೆ ಉಪಾಧ್ಯಕ್ಷರಾಗಿ ಹೇಮಲತಾ ಕಮಲ್ ಕುಮಾರ್ ಅವಿರೋಧ ಆಯ್ಕೆ: ಮೈತ್ರಿ ಧರ್ಮ ಪಾಲಿಸಿದ ಬಿಜೆಪಿ, ಸ್ಥಾನ ಕಾಪಾಡಿಕೊಂಡ ಜೆಡಿಎಸ್

ಹಾಸನ, ಏಪ್ರಿಲ್ 16, 2025: ಹಾಸನ ನಗರಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ ಹೇಮಲತಾ ಕಮಲ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 ಚುನಾವಣಾ ಅಧಿಕಾರಿ ಜೆ.ಬಿ. ಮಾರುತಿ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಹೇಮಲತಾ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಒಟ್ಟು 35 ಸದಸ್ಯರ ಬಲ ಹೊಂದಿರುವ ಹಾಸನ ನಗರಸಭೆಯಲ್ಲಿ ಜೆಡಿಎಸ್ 17, ಬಿಜೆಪಿ 13, ಕಾಂಗ್ರೆಸ್ 2 ಮತ್ತು ಪಕ್ಷೇತರ 3 ಸದಸ್ಯರನ್ನು ಒಳಗೊಂಡಿದೆ. ಈ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಜೆಡಿಎಸ್‌ಗೆ ಸಹಕಾರ ನೀಡಿ ಮೈತ್ರಿ ಪಾಲಿಸಿದ್ದರಿಂದ, ಹೇಮಲತಾ ಅವರ ಆಯ್ಕೆಗೆ ಮಾರ್ಗ ಸುಗಮಗೊಂಡಿತು.

ಚುನಾವಣಾ ಪ್ರಕ್ರಿಯೆಯಲ್ಲಿ ಎಂಎಲ್ಸಿ ಸೂರಜ್ ರೇವಣ್ಣ ಭಾಗವಹಿಸಿದ್ದರು. ನೂತನ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಹೇಮಲತಾ ಕಮಲ್ ಕುಮಾರ್ ಅವರಿಗೆ ಸೂರಜ್ ರೇವಣ್ಣ ಶುಭ ಕೋರಿದರು.

ಈ ಆಯ್ಕೆಯು ಹಾಸನ ನಗರಸಭೆಯ ರಾಜಕೀಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯನ್ನು ಜೀವಂತವಾಗಿರಿಸಿದೆ. ಅಧ್ಯಕ್ಷ ಸ್ಥಾನ ಅಂಟಿಕೊಂಡು ಕುಳಿತು ಜೆಡಿಎಸ್ ವರಿಷ್ಠರಿಗೆ ಸೆಡ್ಡು ಹೊಡೆದಿರುವ ಚಂದ್ರೇಗೌಡ ಅವರ ವಿರುದ್ಧದ ಅವಿಶ್ವಾಸ ಮಂಡನೆ ವಿಷಯದಲ್ಲಿಯೂ ಮೈತ್ರಿ ಮುಂದುವರಿಯಲಿದೆಯೇ ಎನ್ನುವುದು ಕುತೂಹಲ ಮೂಡಿಸಿದೆ.