ಹಿರಿಯ ಪತ್ರಕರ್ತ ಎಚ್.ಬಿ. ಮದನಗೌಡರಿಗೆ ಡಾ.ಸುಧಾಕರ ಶೆಟ್ಟಿ ದತ್ತಿ ಪ್ರಶಸ್ತಿ: 13ಕ್ಕೆ ಪ್ರದಾನ

ಹಾಸನ: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು ಕನ್ನಡ ಭಾಷೆ, ಸಂಸ್ಕೃತಿ, ಕಲೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಕೊಡ ಮಾಡುವ ದತ್ತಿ ಪ್ರಶಸ್ತಿಗೆ ಜನಮಿತ್ರ ಪ್ರಾದೇಶಿಕ ಪ್ರತಿಕೆ ಪ್ರಧಾನ ಸಂಪಾದಕ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಬಿ.ಮದನಗೌಡ ಭಾಜನರಾಗಿದ್ದಾರೆ.

ಮಹಾರಾಷ್ಟ್ರದ ಪುಣೆಯ ಹಿರಿಯ ಮಕ್ಕಳ ತಜ್ಞರಾದ ಡಾ.ಸುಧಾಕರ ಶೆಟ್ಟಿ ಅವರು ಸ್ಥಾಪಿಸಿರುವ ಈ ವರ್ಷದ ದತ್ತಿ ಪ್ರಶಸ್ತಿಗೆ ಮದನಗೌಡ ಅವರನ್ನು ದತ್ತಿ ಸಮಿತಿ ಆಯ್ಕೆ ಮಾಡಿದೆ.

ಈ ಪ್ರಶಸ್ತಿಯು ನಗದು ಹಾಗೂ ಪ್ರಶಸ್ತಿ ಪತ್ರ ಸ್ಮರಣಿಕೆ ಒಳಗೊಂಡಿದ್ದು, ಇದೇ ತಿಂಗಳ ೧೩ ರಂದು ಕಾಸರಗೋಡು ಜಿಲ್ಲೆ ಸೀತಾಂಗೋಳಿ ಅಲಯನ್ಸ್ ಸಭಾಂಗಣದಲ್ಲಿ ನಡೆಯುವ ಸಮರಂಭದಲ್ಲಿ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್, ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ, ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಟಿ.ವಿ.ಶಿವಾನಂದ ತಗಡೂಡು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಮೊದಲಾದ ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಕಾ.ಕ.ಪ.ಸ. ಕಾಸರಗೋಡು ಅಧ್ಯಕ್ಷರಾದ ರವಿ ನಾಯ್ಕಾಪು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕ ವಿಶ್ವಶ್ವರ ಭಟ್, ರವಿ ಬೆಳಗೆರೆ ಪುತ್ರಿ ಚೇತನಾ ಬೆಳಗೆರೆ, ಮಡಿಕೇರಿಯ ಹೆಚ್.ಟಿ.ಅನಿಲ್ ಸೇರಿ ಒಟ್ಟು ೧೪ ಮಂದಿ
ವಿವಿಧ ದತ್ತಿನಿಧಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಪ್ರಶಸ್ತಿ ಪ್ರದಾನ ಬಳಿಕ ಕನ್ನಡ ಸಂಸ್ಕೃತಿ ಉತ್ಸವ ನಡೆಯಲಿದೆ.