ಹಾಸನ: ಮುಸಲ್ಮಾನ ಬಂಧುಗಳು ನನ್ನ ಅಣ್ಣ ತಮ್ಮಂದಿರು, ಅವರ ರಕ್ಷಣೆಗಾಗಿ ನಾನು ಜೀವನವನ್ನೇ ಸವೆಸಿದ್ದೇನೆ. ನಾನು ದೇವಸ್ಥಾನಕ್ಕೆ ಹೋಗಿದ್ದೀನಿ, ದರ್ಗಾಕ್ಕೂ ಹೋಗಿದ್ದೀನಿ ಅದರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಬೇಲೂರಿನಲ್ಲಿ ಗುರುವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ನಾವು ಯಾರನ್ನೂ ಬಿಟ್ಟು ಕೊಡುವುದಿಲ್ಲ, ಯಾವ ಸಮುದಾಯಕ್ಕೆ ಅನ್ಯಾಯ ಮಾಡಿದ್ದೇನೆ? ನಾವು ಜೀವನದಲ್ಲಿ ಯಾವುದೇ ಸಮುದಾಯಕ್ಕೂ ಮೋಸ ಮಾಡಿಲ್ಲ.
ನಾನು ಮೋದಿಯವರ ಜತೆ ಸಂಬಂಧ ಬೆಳೆಸಿರುವುದರಲ್ಲಿ ಸ್ವಾರ್ಥ ಇಲ್ಲ, ನಾನೇನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೀನಾ? ಎಂದು ಪ್ರಶ್ನಿಸಿದರು. ಈ ರಾಷ್ಟ್ರದ ರಾಜಕಾರಣ ತುಂಬಾ ವಿಭಿನ್ನವಾಗಿದೆ. ದೇವೇಗೌಡರೇ ಹದಿನೈದು ಚುನಾವಣೆ ಎದುರಿಸಿದ್ದೀರಿ, ಸೋತಿದ್ದೀರಿ, ಗೆದ್ದಿದ್ದೀರಿ ಜಾತ್ಯತೀತರಾಗಿದ್ರಿ,ಕೊನೆಯ ಘಟ್ಟದಲ್ಲಿ ಯಾಕೆ ಮಾರ್ಪಾಡು ಮಾಡಿಕೊಂಡಿದ್ದೀರಿ? ಎನ್ನುತ್ತಾರೆ.
ಹೌದು, ಮಾರ್ಪಾಡು ಮಾಡಿಕೊಂಡಿದ್ದೇನೆ. ನಾನು ಬಂದಿರೋದು ಈ ಜಿಲ್ಲೆಯ ಅಭಿವೃದ್ಧಿಗಾಗಿಯೇ ಹೊರತು ನನ್ನ ಮೊಮ್ಮಗನನ್ನು ಗೆಲ್ಲಿಸಲು ಅಲ್ಲ. ದೇವೇಗೌಡರ ಮಕ್ಕಳು, ಮೊಮ್ಮೊಕ್ಕಳು ಎಂದು ಆರೋಪ ಮಾಡುತ್ತಾರೆ. ಹೇಳಿ, ನಾವು ಯಾರಿಗೆ ಅನ್ಯಾಯ ಮಾಡಿದ್ದೀವಿ? ನಾನು ಇನ್ನೂ ಸ್ವಲ್ಪ ಕಾಲ ಬದುಕಿರುತ್ತೇನೆ. ಕಾಂಗ್ರೆಸ್‌ಗೋಸ್ಕರ ನನ್ನ ಜೀವನವನ್ನು ತೆತ್ತಿದ್ದೀನಿ. ಯಾರಿಗೆ ಅನ್ಯಾಯ ಮಾಡಿದ್ದೇವೆಂದು ಹೇಳಿ ಎಂದರು.
ಯಾರೋ ಒಬ್ಬ ರೇವಣ್ಣ ಅವರ ಮೇಲೆ ಅನಾವಶ್ಯಕವಾಗಿ ಆರೋಪ ಮಾಡ್ತಾರೆ. ಮಾಡಲಿ, ಅವರು ದೊಡ್ಡವರು, ತುಂಬಾ ದೊಡ್ಡವರು ಎಂದು ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ವಿರುದ್ಧ ಕಿಡಿಕಾರಿದರು.
ಈ ದೇಶದ ನೂರು ಕೋಟಿ ಜನಕ್ಕೆ ನಾಯಕತ್ವ ಕೊಡುವ ಕ್ಯಾಪಾಸಿಟಿ ಇರುವುದು ಮೋದಿಯವರಿಗೆ ಮಾತ್ರ, ಮಮತಾ ಬ್ಯಾನರ್ಜಿ, ಸ್ಟಾಲಿನ್ ಆ ಕೆಲಸ ಮಾಡ್ತಾರಾ? ಇವತ್ತು ಮಣಿಪುರದಿಂದ ಪಾದಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಬಗ್ಗೆ ಸಾಕಷ್ಟು ಮಾತನಾಡಬಲ್ಲೆ, ಮೊನ್ನೆ ಬೆಂಗಳೂರಿನಲ್ಲಿ ಸಭೆ ಮಾಡಿದ್ರು, ಅಲ್ಲಿ ಮಹಿಳೆಯೊಬ್ಬರು ಅಧಿಕಾರಿ ಹಣ ಕೇಳ್ತಾರೆ ಅಂತ ಆರೋಪ ಮಾಡಿದ್ರು, ಕೂಡಲೇ ಅವರನ್ನು ಸಸ್ಪೆಂಡ್ ಮಾಡಿ ಅಂದ್ರು, ಅಬ್ಬಾ! ಅವರಿಗೆ ಅನಂತ, ಅನಂತ ಧನ್ಯವಾದಗಳು. ಈ ರಾಜ್ಯ ಇವತ್ತು ಯಾವ ಮಟ್ಟಕ್ಕೆ ಹೋಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕುಟುಕಿದರು.
ಯಾವುದೇ ಕಾರಣಕ್ಕೂ ಈ ಕೆಟ್ಟ ಅಪಪ್ರಚಾರಕ್ಕೆ ಮಾರು ಹೋಗದೆ ಒಬ್ಬ ಯುವಕನನ್ನು ಮುಂಬರುವ ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ ಎಂದು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಗೆಲುವಿಗೆ ಶ್ರಮಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.