ಸೋಮಣ್ಣ ಅಸಮಾಧಾನ ಸಹಜ; ಪ್ರೀತಂ ಜೆ.ಗೌಡ

ಪಕ್ಷದ ವರಿಷ್ಠರು ಅವರ ಶಕ್ತಿಯನ್ನು ಪಕ್ಷಕ್ಕೆ ಬಳಸಿಕೊಳ್ಳುತ್ತಾರೆ

ಹಾಸನ: ವಿ.ಸೋಮಣ್ಣ ಎರಡು ಕ್ಷೇತ್ರಗಳಲ್ಲಿ ಸೋತಿರುವುದರಿಂದ ದಿಗ್ಭ್ರಮೆಗೊಂಡಿರುವುದು ಸಹಜ, ನಮ್ಮ ಪಕ್ಷದ ವರಿಷ್ಠರು ಅವರ ಶಕ್ತಿಯನ್ನು ಪಕ್ಷಕ್ಕೆ ಬಳಸಿಕೊಳ್ಳುತ್ತಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಣ್ಣ ಅವರ ಅಸಮಾಧಾನವನ್ನು ಹಿರಿಯ ನಾಯಕರು ಗಮನಿಸುತ್ತಿದ್ದಾರೆ.

ನಮಗೆ ಸೋಮಣ್ಣ ಅವರ ಬಗ್ಗೆ ಅಪಾರವಾದ ಗೌರವವಿದೆ. ಅವರ ನಲವತ್ತೈದು ವರ್ಷಗಳ ಸುದೀರ್ಘ ರಾಜಕೀಯದಲ್ಲಿ ಕಾರ್ಪೋರೇಟರ್ ಸ್ಥಾನದಿಂದ ಆರಂಭಿಸಿ ಮಂತ್ರಿಯಾಗಿ ರಾಜ್ಯದ ಉದ್ದಗಲಕ್ಕೂ ಅವರದ್ದೇ ಆದ ಪ್ರಭಾವವನ್ನು ಬೆಳೆಸಿಕೊಂಡಿರುವ ಹಿರಿಯ‌ ನಾಯಕರಾಗಿದ್ದಾರೆ.

ಯಾವಾಗಲೂ ಅವರಿಗೆ ಚುನಾವಣೆ ಸೋಲು ಇಷ್ಟು ಆಘಾತ ಕೊಟ್ಟಿರಲಿಲ್ಲ. ಸೋಮಣ್ಣ ಅವರದ್ದೇ ಆದ ಶಕ್ತಿ ಇಟ್ಟುಕೊಂಡಿದ್ದಾರೆ.

ಅವರಿಗೆ ರಾಜ್ಯದ ಹಿರಿಯರು, ರಾಷ್ಟ್ರೀಯ ಹಿರಿಯ ನಾಯಕರು ಕುಳಿತು ಚರ್ಚೆ ಮಾಡಿ ಅವರ ಶಕ್ತಿಯನ್ನು ಬಳಸಿಕೊಳ್ಳಲಿದ್ದಾರೆ ಎಂದರು.